ಕ್ರಿಕೆಟ್

ಟಿ20 ವಿಶ್ವಕಪ್: 7.1 ಓವರ್ ನಲ್ಲಿ ಭಾರತ ಗೆದ್ದರೆ, ಆಫ್ಘನ್, ನ್ಯೂಜಿಲೆಂಡ್ ಅನ್ನು ಹಿಂದಿಕ್ಕಲಿದೆ!

Srinivasamurthy VN

ದುಬೈ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮೀಸ್ ಹಂತಕ್ಕೇರಲು ಹರಸಾಹಸ ಪಡುತ್ತಿರುವ ಭಾರತ ತಂಡ ಇಂದಿನ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ 7.1 ಓವರ್ ನಲ್ಲಿ ಗೆದ್ದರೆ ನೆಟ್ ರನ್ ರೇಟ್ ನಲ್ಲಿ ಆಫ್ಘನಿಸ್ತಾನ ಮತ್ತು ನ್ಯೂಜಿಲೆಂಡ್ ಗಳನ್ನು ಹಿಂದಿಕ್ಕಲಿದೆ.

ಹೌದು..ಭಾರತ ತಂಡ ಸೆಮೀಸ್ ಹಂತಕ್ಕೆ ಹೋಗಬೇಕು ಎಂದರೆ ತನ್ನ ಭರ್ಜರಿ ಪ್ರದರ್ಶನ ಮಾತ್ರವಲ್ಲ ನೆಟ್ ರನ್ ರೇಟ್ ನಲ್ಲೂ ಮುಂದಿರಬೇಕಿದೆ. ಪ್ರಸ್ತುತ ಭಾರತದ ನೆಟ್ ರನ್ ರೇಟ್ +0.073ರಷ್ಟಿದ್ದು, ಭಾರತ ತಾನಾಡಿರುವ ಮೂರು ಪಂದ್ಯಗಳಲ್ಲಿ 1ರಲ್ಲಿ ಮಾತ್ರ ಜಯಗಳಿಸಿದೆ. 

ಪ್ರಸುತ ನೆಟ್ ರನ್ ರೇಟ್ ನಲ್ಲಿ ಆಫ್ಘಾನಿಸ್ತಾನಕ್ಕಿಂತ ಕೆಳಗಿರುವ ಭಾರತ ತಂಡ ಇಂದಿನ ಪಂದ್ಯವನ್ನು 7.1 ಓವರ್ ನಲ್ಲಿ ಗೆದ್ದರೆ ಆಗ ಭಾರತದ ನೆಟ್ ರನ್ ರೇಟ್ +1ಕ್ಕೆ ಏರಲಿದೆ. ಇದು ಭಾರತ ಸೆಮೀಸ್ ಹಂತಕ್ಕೆ ಏರಲು ನಿರ್ಣಾಯಕ ಪಾತ್ರವಹಿಸುವ ಸಾಧ್ಯತೆ ಇದೆ.

ಭಾರತಕ್ಕೆ ತಲೆನೋವು ತಂದ ನ್ಯೂಜಿಲೆಂಡ್ ಗೆಲುವು
ಇಂದು ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ನಮೀಬಿಯಾ ವಿರುದ್ಧ 52 ರನ್ ಗಳ ಭರ್ಜರಿ ಜಯ ದಾಖಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿತು. ಈ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ನಮೀಬಿಯಾ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 111ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ ನ್ಯೂಜಿಲೆಂಡ್ ವಿರುದ್ಧ 52 ರನ್ ಗಳ ಹೀನಾಯ ಸೋಲು ಕಂಡಿತು.

ಈ ಭರ್ಜರಿ ಗೆಲುವಿನ ಮೂಲಕ ನ್ಯೂಜಿಲೆಂಡ್ ತಂಡ ಅಂಕಗಳಿಕೆಯನ್ನು 6ಕ್ಕೇರಿಸಿಕೊಂಡಿದ್ದು, ಅಲ್ಲದೆ ತನ್ನ ನೆಟ್ ರನ್ ರೇಟ್ ಅನ್ನು ಮತ್ತಷ್ಟು ಉತ್ತಮಗೊಳಿಸಿಕೊಂಡಿದೆ. ಪ್ರಸ್ತುತ ನ್ಯೂಜಿಲೆಂಡ್ +1.277 ನೆಟ್ ರನ್ ರೇಟ್ ನೊಂದಿಗೆ ಆಫ್ಘಾನಿಸ್ತಾನವನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೆ ಜಿಗಿದಿದೆ. ಆಡಿರುವ 4 ಪಂದ್ಯಗಳಲ್ಲಿ 2 ಪಂದ್ಯ ಗೆದ್ದಿರುವ ಆಫ್ಘಾನಿಸ್ತಾನ ತಂಡ 4 ಅಂಕಗಳೊಂದಿಗೆ +1.481 ರನ್ ರೇಟ್ ನೊಂದಿಗೆ ಮೂರನೇ ಸ್ಥಾನದಲ್ಲಿದೆ.  ಆಡಿರುವ ಮೂರು ಪಂದ್ಯಗಳ ಪೈಕಿ 1ರಲ್ಲಿ ಗೆದ್ದು 2 ಅಂಕ ಹೊಂದಿರುವ ಭಾರತ ತಂಡ +0.073 ನೆಟ್ ರನ್ ರೇಟ್ ನೊಂದಿಗೆ 4ನೇ ಸ್ಥಾನದಲ್ಲಿದೆ. 

ಭಾರತ ತಂಡ ಸೆಮೀಸ್ ಹಂತಕ್ಕೆ ಹೋಗಬೇಕು ಎಂದರೆ ತನ್ನ ಭರ್ಜರಿ ಪ್ರದರ್ಶನ ಮಾತ್ರವಲ್ಲ ನ್ಯೂಜಿಲೆಂಡ್ ತಂಡ ಸೊಲಿಗೂ ಎದುರು ನೋಡಬೇಕಾದ ಪರಿಸ್ಥಿತಿ ಇದೆ. 
 

SCROLL FOR NEXT