ಕ್ರಿಕೆಟ್

17ರ ಪೈಕಿ 16 ಪಂದ್ಯದಲ್ಲಿ 2ನೇ ಬ್ಯಾಟಿಂಗ್ ಮಾಡಿದ ತಂಡಕ್ಕೆ ಜಯ; ದುಬೈ ಕ್ರೀಡಾಂಗಣದಲ್ಲಿ ಟಾಸ್ ಗೆದ್ದವನೇ ಬಾಸು!

Srinivasamurthy VN

ದುಬೈ: ಯುಎಇ ಮತ್ತು ಒಮನ್ ನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಫೈನಲ್ ಹಂತಕ್ಕೆ ಬಂದು ನಿಂತಿದ್ದು, ಇಲ್ಲಿಯವರೆಗೂ ನಡೆದ ಬಹುತೇಕ ಎಲ್ಲ ಪಂದ್ಯಗಳಲ್ಲಿ ಟಾಸ್ ಅತ್ಯಂತ ನಿರ್ಣಾಯಕವಾಗಿತ್ತು. 

ಅದರಲ್ಲೂ ಪ್ರಮುಖವಾಗಿ ದುಬೈ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದವನೇ ಬಾಸು ಎಂಬ ಮಾತು ಪದೇ ಪದೇ ನಿಜವಾಗಿದೆ. ನಿನ್ನೆ ನಡೆದ 2ನೇ ಸಮಿ ಪೈನಲ್ ಪಂದ್ಯದಲ್ಲೂ ಅದು ಸಾಬೀತಾಗಿದ್ದು, ಟಾಸ್ ಗೆದ್ದ ಆಸ್ಚ್ರೇಲಿಯಾ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ಬಳಿಕ ಭರ್ಜರಿ ಚೇಸ್ ಮಾಡಿ ಜಯಿಸಿದೆ.

ಇದು ಮಾತ್ರವಲ್ಲ ದುಬೈ ಇಂಟರ್ ನ್ಯಾಷನಲ್ ಕ್ರಿಕೆಟ್ ಮೈದಾನದಲ್ಲಿ ಐಪಿಎಲ್ ಮತ್ತು ಟಿ20 ವಿಶ್ವಕಪ್ ಸೇರಿದಂತೆ ಈ ವರಗೂ ಸತತ 17 ಟಿ20 ಪಂದ್ಯಗಳು ನಡೆದಿದ್ದು, ಈ ಪೈಕಿ 16 ಪಂದ್ಯಗಳಲ್ಲಿ ಎರಡನೇ ಬಾರಿಗೆ ಬ್ಯಾಟಿಂಗ್ ಮಾಡಿದ ತಂಡ ಜಯಗಳಿಸಿದೆ. ಈ ಪಟ್ಟಿಯಲ್ಲಿ ಭಾರತ-ಪಾಕ್ ಪಂದ್ಯ ಕೂಡ ಸೇರಿದೆ. 

ಹಾಲಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ದುಬೈ ಮೈದಾನದಲ್ಲಿ ಸೂಪರ್ 12 ಹಂತದಿಂದ ಈ ವರೆಗೂ ಒಟ್ಟು 12 ಪಂದ್ಯಗಳು ನಡೆದಿದ್ದು, ಈ 12 ಪಂದ್ಯಗಳಲ್ಲೂ 2ನೇ ಬಾರಿಗೆ ಬ್ಯಾಟಿಂಗ್ ಮಾಡಿರುವ ತಂಡಗಳ ಗೆದ್ದು ಬೀಗಿವೆ. ಇನ್ನೂ ಅಚ್ಚರಿ ಎಂದರೆ 12 ಪಂದ್ಯಗಳ ಪೈಕಿ 11 ಪಂದ್ಯಗಳಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ತಂಡಗಳು ಗೆದ್ದಿದ್ದು, ಪಾಕ್ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಆಫ್ಗಾನಿಸ್ತಾನ ಸೋಲು ಕಂಡಿತ್ತು. 

ಈ ಹಿಂದೆ ನಡೆದ ಐಪಿಎಲ್ ಪೈನಲ್ ಪಂದ್ಯ ಇದೇ ಮೈದಾನದಲ್ಲಿ ನಡೆದಿತ್ತು. ಅಂದು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಚೆನ್ನೂ ಸೂಪರ್ ಕಿಂಗ್ಸ್ ತಂಡ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು 27 ರನ್ ಗಳಿಂದ ಮಣಿಸಿತ್ತು.

ಅಂದಹಾಗೆ ಭಾನುವಾರ ಟೂರ್ನಿಯ ಫೈನಲ್ ಪಂದ್ಯ ಕೂಡ ಇದೇ ಮೈದಾನದಲ್ಲಿ ನಡೆಯಲಿದ್ದು, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪಂದ್ಯಗಳು ಪರಸ್ಪರ ಪ್ರಶಸ್ತಿಗಾಗಿ ಕಾದಾಡಲಿವೆ. ಇಲ್ಲೂ ಕೂಡ ಟಾಸ್ ನಿರ್ಣಾಯಕ ಪಾತ್ರವಹಿಸುವ ಸಾದ್ಯತೆ ಇದೆ. 

SCROLL FOR NEXT