ಕ್ರಿಕೆಟ್

ಕೋವಿಡ್ ನಿಂದ ರದ್ದಾಗಿದ್ದ ಭಾರತ-ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಪಂದ್ಯಕ್ಕೆ ಮೂಹೂರ್ತ ಫಿಕ್ಸ್, 2022ರ ಜುಲೈನಲ್ಲಿ ಪಂದ್ಯ

Srinivasamurthy VN

ನವದೆಹಲಿ: ಕೋವಿಡ್ ಸಾಂಕ್ರಾಮಿಕ ಕಾರಣದಿಂದಾಗಿ ರದ್ದಾಗಿದ್ದ ಭಾರತ-ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಪಂದ್ಯಕ್ಕೆ ಕೊನೆಗೂ ಮೂಹೂರ್ತ ಫಿಕ್ಸ್ ಆಗಿದ್ದು, 2022ರ ಜುಲೈನಲ್ಲಿ ಪಂದ್ಯ ಆಯೋಜನೆಗೆ ಬಿಸಿಸಿಐ ಮತ್ತು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗಳು ಸಮ್ಮತಿ ಸೂಚಿಸಿವೆ.

ಈ ಹಿಂದೆ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಭಾರತ ತಂಡ ಇಂಗ್ಲೆಂಡ್ ನಲ್ಲಿ 5 ಟೆಸ್ಟ್ ಪಂದ್ಯಗಳನ್ನು ಆಡಬೇಕಿತ್ತು. ಆದರೆ ಓವಲ್‌ನಲ್ಲಿ ನಡೆದ ಕೊನೆಯ ಟೆಸ್ಟ್‌ ವೇಳೆ ಭಾರತದ ಮುಖ್ಯ ಕೋಚ್ ರವಿಶಾಸ್ತ್ರಿ ಅವರು ಕೊರೊನಾ ಸೋಂಕಿಗೆ ಒಳಗಾಗಿದ್ದರು. ಇದರ ನಂತರ ಬೌಲಿಂಗ್ ತರಬೇತುದಾರ ಭರತ್ ಅರುಣ್ ಮತ್ತು ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಅವರ ವರದಿಯೂ ಕೊರೋನಾ ಪಾಸಿಟಿವ್ ಆಗಿತ್ತು. ಹೀಗಾಗಿ ಉಭಯ ದೇಶಗಳ ಕ್ರಿಕೆಟ್ ಮಂಡಳಿಗಳು ಚರ್ಚೆ ನಡೆಸಿ, ಮ್ಯಾಂಚೆಸ್ಟರ್‌ನಲ್ಲಿ ಆರಂಭವಾಗಬೇಕಿದ್ದ ಟೆಸ್ಟ್ ಪಂದ್ಯವನ್ನು ರದ್ದು ಮಾಡಿದ್ದವು.

ಇದೀಗ ಈ ಪಂದ್ಯವನ್ನು 2022ರ ಜುಲೈ 1ರಂದು ಆಡಿಸಲು ಬಿಸಿಸಿಐ ಮತ್ತು ಇಂಗ್ಲೆಂಡ್-ವೇಲ್ಸ್ ಕ್ರಿಕೆಟ್ ಮಂಡಳಿಗಳು ಒಪ್ಪಿಗೆ ನೀಡಿದ್ದು,  ಮ್ಯಾಂಚೆಸ್ಟರ್ ಬದಲಿಗೆ ಎಡ್ಜ್ ಬ್ಯಾಸ್ಟನ್ ನಲ್ಲಿ ಪಂದ್ಯ ಆಯೋಜನೆ ಮಾಡಲು ಉಭಯ ಮಂಡಳಿಗಳು ನಿರ್ಧರಿಸಿವೆ. 

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ, 'ವೇಳಾಪಟ್ಟಿಯಲ್ಲಿನ ಸಂಕೀರ್ಣತೆಗಳಿಂದಾಗಿ, ಮ್ಯಾಂಚೆಸ್ಟರ್ ನಲ್ಲಿ ಪಂದ್ಯ ಆಯೋಜನೆ ಸಾಧ್ಯವಾಗುತ್ತಿಲ್ಲ, ಆಗಸ್ಟ್ 25, 2022 ರಿಂದ ಮ್ಯಾಂಚೆಸ್ಟರ್ ನಲ್ಲಿ  ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯ ನಡೆಯಲಿದೆ. ಹೀಗಾಗಿ ಭಾರತದ ವಿರುದ್ಧದ ಪಂದ್ಯವನ್ನುಎಡ್ಜ್‌ಬಾಸ್ಟನ್‌ನಲ್ಲಿ ಆಯೋಜಿಸಲಾಗಿದೆ ಎಂದು ಹೇಳಿದೆ.

ಅಂತೆಯೇ ಇಂಗ್ಲೆಂಡ್ ಮತ್ತು ಭಾರತ ನಡುವಿನ ಟಿ 20 ಮತ್ತು ಏಕದಿನ ಸರಣಿಯನ್ನು ಸಹ ಆರು ದಿನಗಳ ಮುಂದಕ್ಕೆ ಹಾಕಲಾಗಿದ್ದು, ಟಿ -20 ಸರಣಿಯು ಜುಲೈ 7 ರಂದು ಆರಂಭವಾಗಲಿದ್ದು, ಏಕದಿನ ಸರಣಿಯು ಜುಲೈ 12 ರಂದು ಓವಲ್‌ನಲ್ಲಿ ಆರಂಭವಾಗಲಿದೆ.

SCROLL FOR NEXT