ಕ್ರಿಕೆಟ್

ಟಿ20 ವಿಶ್ವಕಪ್: ಭಾರತವನ್ನು ಮಣಿಸಿದ ಪಾಕ್, ಪಾಕಿಸ್ತಾನದಲ್ಲಿ ಮುಗಿಲು ಮುಟ್ಟಿದ ಸಂಭ್ರಮ, ಶುಭ ಕೋರಿದ ಗಣ್ಯರು

Srinivasamurthy VN

ಕರಾಚಿ: ದುಬೈ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ತಂಡ ಭಾನುವಾರ ಗೆಲುವು ಸಾಧಿಸುತ್ತಿದ್ದಂತೆಯೇ ಪಾಕಿಸ್ತಾನದಾದ್ಯಂತ ಸಂಭ್ರಮಾಚರಣೆ ಮುಗಿಲುಮುಟ್ಟಿದೆ. ಪಾಕ್ ರಾಜಕೀಯ ಗಣ್ಯರು ಪಾಕ್ ತಂಡಕ್ಕೆ ಶುಭ ಕೋರಿದ್ದಾರೆ.

ವಿಶ್ವಕಪ್‌ ಪಂದ್ಯಗಳಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಆಡಿದ್ದ 12 ಪಂದ್ಯಗಳನ್ನು ಸೋತಿತ್ತು. ಇದೇ ಮೊದಲ ಬಾರಿಗೆ ಭಾರತದ ವಿರುದ್ಧ ಅದರಲ್ಲೂ 10 ವಿಕೆಟ್‌ಗಳ ಅಮೋಘ ಜಯ ಸಾಧಿಸಿದೆ. ಆಮೋಘ ಪ್ರದರ್ಶನ ತೋರಿದ ಪಾಕಿಸ್ತಾನ ಆಟಗಾರರಿಗೆ ಪಾಕಿಸ್ತಾನದಾದ್ಯಂತ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಪ್ರಮುಖವಾಗಿ ತಂಡದ ನಾಯಕ ಬಾಬರ್ ಅಜಂ, ರಿಜ್ವಾನ್ ಮತ್ತು ಬೌಲಿಂಗ್ ನಲ್ಲಿ ಕಮಾಲ್ ಮಾಡಿದ ಶಾಹೀನ್ ಅಫ್ರಿದಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

ಭಾನುವಾರ ಸಂಜೆ ಪಂದ್ಯ ಆರಂಭವಾಗುವ ವೇಳೆಗೆ ಕರಾಚಿಯಲ್ಲಿ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಆದರೆ ಪಂದ್ಯ ಕೊನೆಯ ಹಂತಕ್ಕೆ ಬಂದಂತೆ ಜನಸಾಗರವೇ ರಸ್ತೆಗಳಿಗೆ ಹರಿದುಬಂತು. ಪಾಕಿಸ್ತಾನದ ಕರಾಚಿಯಲ್ಲಿ ವಾಹನಗಳ ಹಾರ್ನ್‌ಗಳನ್ನು ಜೋರಾಗಿ ಮೊಳಗಿಸುತ್ತ ರಸ್ತೆಗಳಲ್ಲಿ ಸಂಚರಿಸಿದ ಅಭಿಮಾನಿಗಳು, ಕೆಲವೆಡೆ ಗಾಳಿಯಲ್ಲಿ ಗುಂಡು ಹಾರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಮತ್ತೊಂದೆಡೆ ಕ್ಲಬ್ ವೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೌಕಾ ಮೌಕಾ ಹಾಡನ್ನು ಹಾಡುವ ಮೂಲಕ ಪಾಕಿಸ್ತಾನ ತಂಡಕ್ಕೆ ಶುಭ ಕೋರಲಾಗಿದೆ. 

SCROLL FOR NEXT