ಕ್ರಿಕೆಟ್

ಆಯ್ಕೆ ಸಮಿತಿ ವಜಾ ಹಿನ್ನಲೆ: ಕ್ರಿಕೆಟ್ ಸಲಹಾ ಸಮಿತಿಗೆ ನೂತನ ಸದಸ್ಯರ ನೇಮಕ ಮಾಡಿದ ಬಿಸಿಸಿಐ!

Srinivasamurthy VN

ಮುಂಬೈ: ಇತ್ತೀಚೆಗಷ್ಟೇ ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯನ್ನು ವಜಾಗೊಳಿಸಿದ್ದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗುರುವಾರ ಕ್ರಿಕೆಟ್ ಸಲಹಾ ಸಮಿತಿಗೆ ನೂತನ ಸದಸ್ಯರ ನೇಮಕ ಮಾಡಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗುರುವಾರ ತನ್ನ ಸುದ್ದಿ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ನೇಮಕವನ್ನು ಪ್ರಕಟಿಸಿದ್ದು, ಮಾಜಿ ಕ್ರಿಕೆಟಿಗರಾದ ಅಶೋಕ್ ಮಲ್ಹೋತ್ರಾ, ಜತಿನ್ ಪರಾಂಜಪೆ ಮತ್ತು ಸುಲಕ್ಷಣಾ ನಾಯಕ್ ಅವರನ್ನು ಸಿಎಸಿ ಸದಸ್ಯರನ್ನಾಗಿ ಬಿಸಿಸಿಐ ನೇಮಕ ಮಾಡಿದೆ.

ತ್ರಿಸದಸ್ಯ ಸಮಿತಿಯಲ್ಲಿ ಸ್ಥಾನ ಪಡೆದಿರುವ ಅಶೋಕ್ ಮಲ್ಹೋತ್ರಾ ಅವರು 7 ಟೆಸ್ಟ್ ಮತ್ತು 20 ODIಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದು, ಇತ್ತೀಚೆಗೆ ಭಾರತೀಯ ಕ್ರಿಕೆಟಿಗರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅಂತೆಯೇ ಸಮಿತಿಯ ಮತ್ತೋರ್ವ ಸದಸ್ಯರಾಗಿರುವ ಜತಿನ್ ಪರಾಂಜಪೆ ಅವರು ಭಾರತಕ್ಕಾಗಿ 4 ಏಕದಿನ ಪಂದ್ಯಗಳನ್ನು ಆಡಿದ್ದು, MSK ಪ್ರಸಾದ್ ಅವರ ನೇತೃತ್ವದ ಮಾಜಿ ಹಿರಿಯ ಪುರುಷರ ಆಯ್ಕೆ ಸಮಿತಿಯ ಭಾಗವಾಗಿದ್ದರು. ಮದನ್ ಲಾಲ್ ಮತ್ತು ಆರ್ ಪಿ ಸಿಂಗ್ ಅವರಿಂದ ತೆರವಾದ ಸ್ಥಾನವನ್ನು ಇವರಿಬ್ಬರು ಪಡೆದುಕೊಂಡಿದ್ದಾರೆ.

ಬಿಸಿಸಿಐ ಸಂವಿಧಾನದ ಪ್ರಕಾರ, 'ಆಯ್ಕೆ ಸಮಿತಿಯನ್ನು ಮೂವರು ಸದಸ್ಯರ ಕ್ರಿಕೆಟ್ ಸಲಹಾ ಸಮಿತಿ ಆಯ್ಕೆ ಮಾಡಬೇಕಾಗಿದೆ.' ಆದರೆ ಮದನ್ ಲಾಲ್ 70 ವರ್ಷಕ್ಕೆ ಕಾಲಿಟ್ಟ ನಂತರ ಕಳೆದ ವರ್ಷ ಅಕ್ಟೋಬರ್‌ನಿಂದ ಸಿಎಸಿಗೆ ಅಧ್ಯಕ್ಷರಿರಲಿಲ್ಲ. ಲಾಲ್ ಅನುಪಸ್ಥಿತಿಯಲ್ಲೇ ಇತರ ಇಬ್ಬರು ಸದಸ್ಯರು ಕೋಚ್ ರವಿಶಾಸ್ತ್ರಿ ಅವರ ಆಯ್ಕೆ ಮಾಡಿದ್ದರು. ನಂತರ ಸಿಎಸಿ - ಸಿಂಗ್ ಮತ್ತು ನಾಯಕ್ ನೇತೃತ್ವದಲ್ಲಿ ಕಳೆದ ವರ್ಷ ನವೆಂಬರ್‌ನಲ್ಲಿ ಪುರುಷರ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರ ಸಂದರ್ಶನವನ್ನು ನಡೆಸಿತ್ತು.

ಹೊಸ CAC ಈಗ ಆಲ್ ಇಂಡಿಯಾ ಹಿರಿಯ ಆಯ್ಕೆ ಸಮಿತಿಯ ಹೊಸ ಐದು ಸದಸ್ಯರ ಸಮಿತಿಯನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಹೊಂದಿದೆ.
 

SCROLL FOR NEXT