ನಾಗ್ಪುರ: ನಾಗ್ಪುರದ ವಿಸಿಎ ಸ್ಟೇಡಿಯಂನಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಹೆಚ್ಚು ಗಮನ ಸೆಳೆದಿದ್ದು ಆಟಗಾರರೇ ಆದರೂ ನೆಟ್ಸ್ ನಲ್ಲಿ ಗಮನ ಸೆಳೆದಿದ್ದು ಮಾತ್ರ ಬೌಲಿಂಗ್ ಮಾಡಿದ ರಾವತ್...
ಹೌದು.. ನಾಲ್ಕು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿಯ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಮತ್ತು 136ರನ್ ಗಳ ಅಂತರದಲ್ಲಿ ಗೆದ್ದಿದ್ದು, ಇದಕ್ಕೂ ಮೊದಲು ಉಭಯ ತಂಡದ ಆಟಗಾರರು ನೆಟ್ಸ್ ನಲ್ಲಿ ಬೆವರಿಳಿಸಿದ್ದರು. ಈ ವೇಳೆ ಉಭಯ ತಂಡದ ಆಟಗಾರರಿಗೆ ಬೌಲಿಂಗ್ ಮಾಡಿ ಗುರುದಾಸ್ ರಾವತ್ ಗಮನ ಸೆಳೆದಿದ್ದಾರೆ. ಒಂದು ಕೈ ಇಲ್ಲದ ಗುರುದಾಸ್ ರಾವತ್ ಒಂದೇ ಕೈಯ ಹೊರತಾಗಿಯೂ ಆತ್ಮವಿಶ್ವಾಸ ಕಳೆದುಕೊಳ್ಳದೇ ದೈತ್ಯ ಬ್ಯಾಟರ್ ಗಳಾದ ಸ್ಟೀವನ್ ಸ್ಮಿತ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಮ್ಯಾಟ್ ರೆನ್ಶಾ ಮತ್ತು ಪೀಟರ್ ಹ್ಯಾಂಡ್ಸ್ಕಾಂಬ್ ಅವರಿಗೆ ಬೌಲಿಂಗ್ ಮಾಡಿ ಗಮನಸೆಳೆದಿದ್ದಾರೆ.
ನೆಟ್ಸ್ ನಲ್ಲಿ ಆಫ್ ಸ್ಪಿನ್ನರ್ ಗಳ ಎದುರಿಸಲು ಬಯಸಿದ್ದ ಆಸಿಸ್ ಬ್ಯಾಟರ್ ಗಳು
ಮೊದಲ ಇನ್ನಿಂಗ್ಸ್ ನಲ್ಲಿ ಕಳಪೆ ಪ್ರದರ್ಶನದ ಬಳಿಕ ಎಚ್ಚೆತ್ತುಕೊಂಡಿದ್ದ ಆಸಿಸ್ ಬ್ಯಾಟರ್ ಗಳು ನೆಟ್ಸ್ ನಲ್ಲಿ ಆಫ್ ಸಿನ್ನರ್ ಗಳನ್ನು ಎದುರಿಸಲು ನಿರ್ಧರಿಸಿದ್ದರು. ಇದರಿಂದ ಭಾರತದ ಸ್ಪಿನ್ನರ್ ಗಳಾದ ಅಶ್ವಿನ್, ಜಡೇಜಾರಂತಹ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಬೇಕು ಎಂಬುದು ಅವರ ಲೆಕ್ಕಾಚಾರವಾಗಿತ್ತು. ಅದರಂತೆ ನೆಟ್ಸ್ ನಲ್ಲಿ ಆಫ್ ಸ್ಪಿನ್ನರ್ ಗಳಿಗೆ ಬೇಡಿಕೆ ಇಟ್ಟಿದ್ದರು. ಹೀಗಾಗಿ ಆಸಿಸ್ ಬ್ಯಾಟರ್ ಗಳಿಗೆ ಗುರುದಾಸ್ ರಾವತ್ ಬೌಲಿಂಗ್ ಮಾಡಿದ್ದಾರೆ. ಅಚ್ಚರಿ ಎಂದರೆ ಮಧ್ಯಮ ವೇಗಿಯಾಗಿದ್ದರೂ, ರಾವತ್ ಆಸೀಸ್ ಬ್ಯಾಟರ್‌ಗಳಿಗೆ ಆಫ್ ಸ್ಪಿನ್ ಬೌಲಿಂಗ್ ಮಾಡಿದರು. ಆದರೆ ಇದು ಆಸಿಸ್ ಬ್ಯಾಟರ್ ಗಳಿಗೆ ಅಚ್ಚರಿ ವಿಷಯವಾಗಿತ್ತು.
ಇದನ್ನೂ ಓದಿ: ಪ್ರಬಲ ಆಸಿಸ್ ವಿರುದ್ಧ ಭರ್ಜರಿ ಜಯ: ಐಸಿಸಿ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಗೆ ಟೀಂ ಇಂಡಿಯಾ ಮತ್ತಷ್ಟು ಸನಿಹ!
ಆಸಿಸ್ ಬ್ಯಾಟರ್ ಗಳಾದ ಲ್ಯಾಬುಸ್ಚಾಗ್ನೆ ಮತ್ತು ಸ್ನಿತ್ ನೆಟ್ಸ್‌ನಲ್ಲಿ ಎದುರಿಸಿದ ಸಂಗತಿಗಳಿಂದ ವಿಶೇಷವಾಗಿ ಪ್ರಭಾವಿತರಾದರು. ಒಂದು ಕೈ ಇಲ್ಲದಿದ್ದರೂ ರಾವತ್ ಅತ್ಯಂತ ಚಾತುರ್ಯದಿಂದ ಬೌಲಿಂಗ್ ಮಾಡಿದರು. ಕೇವಲ ಆಸಿಸ್ ಬ್ಯಾಟರ್ ಗಳು ಮಾತ್ರವಲ್ಲದೇ ಭಾರತದ ಆರಂಭಿಕ ಆಟಗಾರ ಶುಭಮನ್ ಗಿಲ್, ಆಲ್‌ರೌಂಡರ್ ರವೀಂದ್ರ ಜಡೇಜಾ, ವಿಕೆಟ್‌ಕೀಪರ್-ಬ್ಯಾಟರ್‌ಗಳಾದ ಇಶಾನ್ ಕಿಶನ್ ಮತ್ತು ಕೆಎಸ್ ಭರತ್ ಕೂಡ ತಮ್ಮ ತರಬೇತಿ ಅವಧಿಯಲ್ಲಿ ರಾವತ್‌ರನ್ನು ಎದುರಿಸಿದ್ದರು. ರಾವತ್ ಅವರ ಬೌಲಿಂಗ್ ನಲ್ಲಿ ಎರಡು ಬಾರಿ ಔಟಾದ ಇಶಾನ್ ಕಿಶನ್, ಬೌಲರ್‌ಗೆ ಎಲ್ಲರೂ ಪ್ರಶಂಸೆ ವ್ಯಕ್ತಪಡಿಸಿದರು. ರಾವತ್ ಗೆ ಹಂಚಿಕೊಂಡ ವೀಡಿಯೊ ಸಂದೇಶದಲ್ಲಿ, "ನೀವು ನಿಜವಾಗಿಯೂ ಚೆನ್ನಾಗಿ ಬೌಲಿಂಗ್ ಮಾಡಿದ್ದೀರಿ. ಕಠಿಣ ಕೆಲಸವನ್ನು ಮಾಡುತ್ತಲೇ ಇರಿ ಮತ್ತು ಹೊರಗಿನ ಶಬ್ದವನ್ನು ನಿರ್ಲಕ್ಷಿಸಿ. ನೀವು ಮಾಡುತ್ತಿರುವ ರೀತಿಯಲ್ಲಿ ಬೌಲಿಂಗ್ ಮಾಡಿ" ಎಂದು ಹೇಳುವ ಮೂಲಕ ಇಶಾನ್ ಬೌಲರ್ ಅನ್ನು ಶ್ಲಾಘಿಸಿದ್ದಾರೆ.
12 ವರ್ಷಗಳ ಸೇವೆ
ರಾವತ್ ಸೇವೆ ಪ್ರಾರಂಭವಾದದ್ದು 2011 ರ ವಿಶ್ವಕಪ್‌ನಲ್ಲಿ, ಅಂತಿಮವಾಗಿ ಆತಿಥೇಯ ಭಾರತವು ಎಂಎಸ್ ಧೋನಿ ನಾಯಕತ್ವದಲ್ಲಿ ಗೆದ್ದಿತು. ರಾವತ್ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ (ವಿಸಿಎ) ನೆಟ್ಸ್‌ನಲ್ಲಿ ಅಂತರರಾಷ್ಟ್ರೀಯ ತಂಡಗಳಿಗಾಗಿ ಬೌಲಿಂಗ್ ಆರಂಭಿಸಿ 12 ವರ್ಷಗಳಾಗಿವೆ. ಈ ಬಗ್ಗೆ ಮಾತನಾಡಿರುವ ರಾವತ್, "ನನಗೆ ಇಲ್ಲಿನ ನೆಟ್ಸ್‌ನಲ್ಲಿ ಬೌಲಿಂಗ್ ಮಾಡಲು ಅವಕಾಶ ನೀಡಿದ ವಿಸಿಎ ಮತ್ತು ಅದರ ಮಾಜಿ ಅಧ್ಯಕ್ಷ ಅದ್ವೈತ್ ಮನೋಹರ್ ಅವರಿಗೆ ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ. ದೇಶದಲ್ಲಿ ವಿಕಲಚೇತನ ಕ್ರಿಕೆಟಿಗರನ್ನು ಉತ್ತೇಜಿಸುತ್ತಿರುವ ರವಿ ಚೌಹಾಣ್ ಸರ್ ಅವರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಾರ್ಡರ್-ಗವಾಸ್ಕರ್ ಟ್ರೋಫಿ; ಮೊದಲ ಟೆಸ್ಟ್: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಇನ್ನಿಂಗ್ಸ್ ಮತ್ತು 132 ರನ್ ಗೆಲುವು
"ನನ್ನ ಪೋಷಕರು ಯಾವಾಗಲೂ ನನ್ನನ್ನು ಪ್ರೇರೇಪಿಸುತ್ತಾರೆ. ಅವರು ನನ್ನಲ್ಲಿ ಆ ನಂಬಿಕೆ ಮತ್ತು ವಿಶ್ವಾಸವನ್ನು ತುಂಬುವ ಮೂಲಕ ನನ್ನನ್ನು ಧೈರ್ಯಶಾಲಿಯಾಗಿಸಿದರು. ಈಗ ನಾನು ಈ ಅಂತಾರಾಷ್ಟ್ರೀಯ ಕ್ರಿಕೆಟಿಗರಿಗೆ ಬೌಲಿಂಗ್ ಮಾಡುವ ಮೂಲಕ ಪಡೆದ ಅನುಭವವನ್ನು ಒಳಗೊಂಡಂತೆ ನನ್ನ ಅನುಭವಗಳನ್ನು ಸಹ ಅಂಗವಿಕಲ ಕ್ರಿಕೆಟಿಗರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನಾನು ಮುಂದುವರಿಯಲು ಕಾರಣ ನನ್ನ ಅಂಗವೈಕಲ್ಯವೇ ನನ್ನ ಸಾಮರ್ಥ್ಯ ಎಂದು ನಾನು ಯಾವಾಗಲೂ ಭಾವಿಸುತ್ತೇನೆ. ನಾನು ಯಾವಾಗಲೂ ಎರಡೂ ಕೈಗಳನ್ನು ಹೊಂದಿದ್ದೇನೆ ಎಂದು ನಾನು ಭಾವಿಸುತ್ತೇನೆ" ಎಂದು ರಾವತ್ ಹೇಳಿದ್ದಾರೆ.
ಬಾಲ್ಯದಲ್ಲಿ ರಾವತ್ ದೇಶವನ್ನು ಪ್ರತಿನಿಧಿಸುವ ಕನಸು ಕಂಡಿದ್ದರು. ಅದೃಷ್ಟವಶಾತ್, ಅವರು 2012 ರಿಂದ ಅಂಗವಿಕಲ ಕ್ರಿಕೆಟಿಗರಿಗಾಗಿ ನಡೆಯುತ್ತಿರುವ ಪಂದ್ಯಾವಳಿಗಳಲ್ಲಿ ದೇಶಕ್ಕಾಗಿ ಆಡುವ ಮೂಲಕ ತಮ್ಮ ಕನಸನ್ನು ಜೀವಂತವಾಗಿಸಿದ್ದಾರೆ. ಅವರು 2019 ರಲ್ಲಿ ಇಂಗ್ಲೆಂಡ್‌ನಲ್ಲಿ ಮೊಟ್ಟಮೊದಲ T20 ದೈಹಿಕ ಅಂಗವಿಕಲರ ವಿಶ್ವ ಕ್ರಿಕೆಟ್ ಸರಣಿಯನ್ನು ಗೆದ್ದ ರಾಷ್ಟ್ರೀಯ ತಂಡದ ಸದಸ್ಯರೂ ಕೂಡ ಆಗಿದ್ದರು.