ಕ್ರಿಕೆಟ್

ನ್ಯೂಜಿಲೆಂಡ್ ವಿರುದ್ಧ ದ್ವಿಶತಕ: ಕ್ರಿಕೆಟ್ ಜಗತ್ತಿನ Elite Club ಸೇರಿದ ಶುಭ್ ಮನ್ ಗಿಲ್, ಭಾರತದ 5ನೇ ಆಟಗಾರ, 7ನೇ ದ್ವಿಶತಕ

Srinivasamurthy VN

ಹೈದರಾಬಾದ್: ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತದ ಬೃಹತ್ ಮೊತ್ತಕ್ಕೆ ಕಾರಣವಾಗಿರುವ ಶುಭ್ ಮನ್ ಗಿಲ್ ತಮ್ಮ ಅಮೋಘ ದ್ವಿಶತಕ ಮೂಲಕ ಕ್ರಿಕೆಟ್ ಜಗತ್ತಿನ Elite Club ಸೇರಿದ್ದಾರೆ.

ಹೌದು.. ಹೈದರಾಬಾದ್ ನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಶುಭ್ ಮನ್ ಗಿಲ್ ಭರ್ಜರಿ ಬ್ಯಾಟಿಂಗ್ ಮೂಲಕ ಏಕದಿನ ಕ್ರಿಕೆಟ್ ನಲ್ಲಿ ತಮ್ಮ ಚೊಚ್ಚಲ ದ್ಪಿಶತಕ ಸಿಡಿಸಿದರು.

ಕೇವಲ 149 ಎಸೆತಗಳನ್ನು ಎದುರಿಸಿದ ಗಿಲ್ 9 ಸಿಕ್ಸರ್ ಮತ್ತು 19 ಬೌಂಡರಿಗಳ ನೆರವಿನಿಂದ 208ರನ್ ಗಳನ್ನು ಕಲೆಹಾಕಿದರು. ಆ ಮೂಲಕ ಏಕದಿನ ಕ್ರಿಕೆಟ್ ವೃತ್ತಿ ಜೀವನದ ಚೊಚ್ಚಲ ದ್ವಿಶತಕ ಸಿಡಿಸಿದರು.

ಅಂತೆಯೇ ಈ ದ್ವಿಶತಕ ಮೂಲಕ ಗಿಲ್ ಕ್ರಿಕೆಟ್ ಲೋಕದ ಅಪರೂಪದ ಸಾಧನೆ ಮಾಡಿದ್ದು, ಏಕದಿನ ಕ್ರಿಕೆಟ್ ನಲ್ಲಿ ದ್ವಿಶತಕ ಸಿಡಿಸಿದ ಅತ್ಯಂತ ಚಿಕ್ಕ ವಯಸ್ಸಿನ ಕ್ರಿಕೆಟಿಗ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಅಂತೆಯೇ ಜಾಗತಿಕ ಕ್ರಿಕೆಟ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಗರಿಷ್ಛ ವೈಯುಕ್ತಿಕ ಸ್ಕೋರ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಗಿಲ್ ಅಗ್ರಸ್ಥಾನಕ್ಕೇರಿದ್ದಾರೆ.

ಭಾರತದ 5ನೇ ಆಟಗಾರ, 7ನೇ ದ್ವಿಶತಕ
ಇನ್ನು ಏಕದಿನ ಕ್ರಿಕೆಟ್ ನಲ್ಲಿ ಗಿಲ್ ಸಿಡಿಸಿದ ದ್ವಿಶತಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ನಲ್ಲಿ ದಾಖಲಾದ 10ನೇ ದ್ವಿಶತಕವಾಗಿದೆ. ಅಂತೆಯೇ ಭಾರತದ ಪರ ದಾಖಲಾದ 7ನೇ ದ್ವಿಶತಕವಾಗಿದೆ. ಅಲ್ಲದೆ ಭಾರತದ ಪರ ದ್ವಿಶತಕ ಸಿಡಿಸಿದ 5ನೇ ಆಟಗಾರ ಎಂಬ ಕೀರ್ತಿಗೆ ಶುಭ್ ಮನ್ ಗಿಲ್ ಪಾತ್ರರಾಗಿದ್ದಾರೆ.

ಈ ಹಿಂದೆ ಭಾರತದ ಪರ ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್, ರೋಹಿತ್ ಶರ್ಮಾ, ಇಶಾನ್ ಕಿಶನ್ ಭಾರತದ ಪರ ದ್ವಿಶತಕದ ಸಾಧನೆ ಮಾಡಿದ್ದರು. ಇದೀಗ ಈ ಪಟ್ಟಿಗೆ ಶುಭ್ ಮನ್ ಗಿಲ್ ಸೇರಿದ್ದಾರೆ. ಗಿಲ್ ಇಂದು ಸಿಡಿಸಿದ ದ್ವಿಶತಕ ಭಾರತದ ಪರ ದಾಖಲಾದ 7ನೇ ದ್ವಿಶತಕವಾಗಿದೆ. ಈ ಏಳು ದ್ವಿಶತಕಗಳ ಪೈಕಿ ರೋಹಿತ್ ಶರ್ಮಾ 3 ಬಾರಿ ದ್ವಿಶತಕ ಸಿಡಿಸಿದ್ದಾರೆ.

ದ್ವಿಶತಕ ಸಿಡಿಸಿದ ಜಗತ್ತಿನ 8ನೇ ಆಟಗಾರ
ಇನ್ನು ಜಾಗತಿಕ ಕ್ರಿಕೆಟ್ ನಲ್ಲಿ ಏಕದಿನ ಮಾದರಿಯಲ್ಲಿ ದ್ವಿಶತಕ ಸಿಡಿಸಿದ ಜಗತ್ತಿನ 8ನೇ ಆಟಗಾರ ಎಂಬ ಕೀರ್ತಿಗೂ ಗಿಲ್ ಪಾತ್ರರಾಗಿದ್ದಾರೆ. ಭಾರತದ ಆಟಗಾರರು ಮಾತ್ರವಲ್ಲದೇ ವೆಸ್ಟ್ ಇಂಡೀಸ್ ಕ್ರಿಸ್ ಗೇಯ್ಲ್, ನ್ಯೂಜಿಲೆಂಡ್ ನ ಮಾರ್ಟಿನ್ ಗಪ್ಟಿಲ್ ಮತ್ತು ಪಾಕಿಸ್ತಾನದ ಫಖರ್ ಜಮಾನ್ ದ್ವಿಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ.
 

SCROLL FOR NEXT