ನವದೆಹಲಿ: ಐಸಿಸಿ ಏಕದಿನ ವಿಶ್ವಕಪ್ ಅರ್ಹತಾ ಟೂರ್ನಿಯಲ್ಲಿ ಸ್ಕಾಟ್ಲೆಂಡ್ ವಿರುದ್ಧ ಹೀನಾಯ ಸೋಲು ಕಾಣುವ ಮೂಲಕ 2 ಬಾರಿ ಚಾಂಪಿಯನ್ ವೆಸ್ಟ್ ಇಂಡೀಸ್ ಏಕದಿನ ವಿಶ್ವಕಪ್‌ಗೆ ಅರ್ಹತೆ ಪಡೆಯಲು ವಿಫಲವಾಗಿದೆ.
ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡ ಇದೇ ಮೊದಲ ಬಾರಿಗೆ ಏಕದಿನ ವಿಶ್ವಕಪ್‌ನಿಂದ ದೂರ ಉಳಿದಿದ್ದು, ಅರ್ಹತಾ ಟೂರ್ನಿಯಲ್ಲಿ ಶನಿವಾರ ಸ್ಕಾಟ್ಲೆಂಡ್ ಎದುರು 7 ವಿಕೆಟ್‌ಗಳಿಂದ ಮುಖಭಂಗ ಅನುಭವಿಸುವ ಮೂಲಕ ವಿಶ್ವಕಪ್‌ನಲ್ಲಿ ಸ್ಥಾನ ಪಡೆಯುವ ಆ ತಂಡದ ಕನಸು ಭಗ್ನಗೊಂಡಿದೆ. ಇಂದು ನಡೆದ ಅರ್ಹತಾ ಟೂರ್ನಿಯ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 7 ವಿಕೆಟ್ ಗಳ ಅಂತರದ ಹೀನಾಯ ಸೋಲು ಕಂಡಿದೆ. ಆ ಮೂಲಕ ಏಕದಿನ ಏಕದಿನ ವಿಶ್ವಕಪ್ ಟೂರ್ನಿಗೆ ಅರ್ಹತೆ ಗಳಿಸುವಲ್ಲಿ ವಿಫಲವಾಗಿ ಟೂರ್ನಿ ಆರಂಭಕ್ಕೂ ಮುನ್ನವೇ ಟೂರ್ನಿಯಿಂದ ಹೊರಬಿದ್ದಿದೆ.
ಟಾಸ್ ಗೆದ್ದ ಸ್ಕಾಟ್ಲೆಂಡ್, ವೆಸ್ಟ್ ಇಂಡೀಸ್ ತಂಡವನ್ನು ಬ್ಯಾಟಿಂಗಿಗೆ ಇಳಿಸಿ 43.2 ಓವರುಗಳಲ್ಲಿ 181 ರನ್‌ಗಳಿಗೆ ಕಟ್ಟಿಹಾಕಿತು. ಈ ಮೊತ್ತವನ್ನು ಸ್ಕಾಟ್ಲೆಂಡ್ ಇನ್ನೂ 39 ಎಸೆತಗಳಿರುವಂತೆ (3 ವಿಕೆಟ್‌ಗೆ 185) ದಾಟಿತು. ಮೂರು ವಿಕೆಟ್ ಪಡೆದಿದ್ದ ಮೆಕ್‌ಮುಲೆನ್ ಬ್ಯಾಟಿಂಗ್‌ನಲ್ಲೂ ಮಿಂಚಿ 69 ರನ್ ಬಾರಿಸಿದರು. ಆರಂಭ ಆಟಗಾರ ಮ್ಯಾಥ್ಯೂ ಕ್ರಾಸ್ 74 ರನ್ ಗಳಿಸಿ ಅಜೇಯರಾಗುಳಿದರು. ಅರ್ಹತಾ ಟೂರ್ನಿಯಿಂದ ಎರಡು ತಂಡಗಳಷ್ಟೇ ವಿಶ್ವಕಪ್‌ನಲ್ಲಿ ಸ್ಥಾನ ಪಡೆಯಲಿವೆ. ಅಕ್ಟೋಬರ್ 5 ರಿಂದ ನವೆಂಬರ್ 19ರವರೆಗೆ ಭಾರತದಲ್ಲಿ ವಿಶ್ವಕಪ್ ನಡೆಯಲಿದೆ.
ಅರ್ಹತಾ ಟೂರ್ನಿಯಲ್ಲಿ ವಿಂಡೀಸ್ ಹೀನಾಯ ಪ್ರದರ್ಶನ
ಈ ಬಾರಿಯ ಏಕದಿನ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ತಂಡವು ಯುಎಸ್ಎ ಮತ್ತು ನೇಪಾಳ ವಿರುದ್ಧ ಜಯಗಳಿಸಿತ್ತು. ಆದರೆ ಝಿಂಬಾಬ್ವೆ ಹಾಗೂ ನೆದರ್ಲ್ಯಾಂಡ್ಸ್ ವಿರುದ್ಧ ಹೀನಾಯ ಸೋಲನುಭವಿಸಿತ್ತು. ಇದಾಗ್ಯೂ 2 ಗೆಲುವಿನೊಂದಿಗೆ ಕೆರಿಬಿಯನ್ ಪಡೆ ಅರ್ಹತಾ ಸುತ್ತಿನ ಸೂಪರ್ ಸಿಕ್ಸ್ ಹಂತಕ್ಕೇರಿತು. ಆದರೆ ಸೂಪರ್ ಸಿಕ್ಸ್ನ ಮೊದಲ ಪಂದ್ಯದಲ್ಲೇ ಸ್ಕಾಟ್ಲ್ಯಾಂಡ್ ವಿರುದ್ಧ ಪರಾಜಯಗೊಂಡಿದೆ. ಇದರೊಂದಿಗೆ ಭಾರತದಲ್ಲಿ ಏಕದಿನ ವಿಶ್ವಕಪ್ ಆಡುವ ವೆಸ್ಟ್ ಇಂಡೀಸ್ ತಂಡದ ಕನಸು ಕಮರಿದೆ. ಸೂಪರ್ ಸಿಕ್ಸ್ ಹಂತದಲ್ಲಿ ವೆಸ್ಟ್ ಇಂಡೀಸ್ ಮೂರು ಪಂದ್ಯಗಳಿಂದ ಒಂದೂ ಪಾಯಿಂಟ್ ಪಡೆದಿಲ್ಲ.
ಶ್ರೀಲಂಕಾ ಮತ್ತು ಆತಿಥೇಯ ಜಿಂಬಾಬ್ವೆ ತಂಡಗಳು ಈಗಾಗಲೇ 3 ಪಂದ್ಯಗಳಿಂದ ಆರು ಪಾಯಿಂಟ್ಸ್ ಪಡೆದಿವೆ. ಸ್ಕಾಟ್ಲೆಂಡ್ ಒಟ್ಟು ನಾಲ್ಕು ಪಾಯಿಂಟ್ಸ್ ಸಂಗ್ರಹಿಸಿದ್ದು, ಜಿಂಬಾಬ್ವೆ ಮತ್ತು ನೆದರ್ಲೆಂಡ್ಸ್ ವಿರುದ್ಧ ಪಂದ್ಯಗಳು ಬಾಕಿ ಇರುವ ಕಾರಣ ಆ ತಂಡಕ್ಕೆ ಅರ್ಹತೆಯ ಬಾಗಿಲು ಇನ್ನೂ ತೆರೆದಿದೆ. 1975 ಮತ್ತು 1979ರ ಮೊದಲ ಎರಡು ವಿಶ್ವಕಪ್‌ಗಳಲ್ಲಿ ಅಮೋಘ ರೀತಿಯಲ್ಲಿ ಗೆದ್ದ ವೆಸ್ಟ್ ಇಂಡೀಸ್, 1983ರಲ್ಲಿ ನಡೆದ ಮೂರನೇ ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತಕ್ಕೆ ಸೋತಿತ್ತು.
ಕೋಚ್ ಆಕ್ರೋಶ
ತಂಡದ ಹೀನಾಯ ಸ್ಥಿತಿಗೆ ಕೋಚ್ ಡ್ಯಾರೆನ್ ಸಮಿ ಸ್ವತಃ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ನಾವು ಟೂರ್ನಿಯಲ್ಲೇ ಅತ್ಯಂತ ಕಳಪೆ ಫೀಲ್ಡಿಂಗ್ ತಂಡವಾಗಿದ್ದೆವು. ಶನಿವಾರದ ಪಂದ್ಯದಲ್ಲೂ ಅದು ಕಳಪೆಯಾಗೇ ಇತ್ತು ಎಂದರು. ಅಂತೆಯೇ ನಾವು ಯಾವುದೇ ಪಂದ್ಯದಲ್ಲಿ ನೂರಕ್ಕೆ ನೂರರಷ್ಟು ಪ್ರಯತ್ನ ಹಾಕಲಿಲ್ಲ’ ಎಂದು ನಾಯಕ ಶಾಯಿ ಹೋಪ್ ಒಪ್ಪಿಕೊಂಡರು.