ಕ್ರಿಕೆಟ್

ಟೆಸ್ಟ್ ಚಾಂಪಿಯನ್ ಷಿಪ್ ಅಂಕಪಟ್ಟಿ: ವೆಸ್ಟ್ ಇಂಡೀಸ್ ವಿರುದ್ಧ ಸರಣಿ ಗೆದ್ದರೂ ಕುಸಿದ ಭಾರತ; ಅಗ್ರಸ್ಥಾನಕ್ಕೆ ಪಾಕಿಸ್ತಾನ

Srinivasamurthy VN

ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಗೆದ್ದರೂ ಐಸಿಸಿ ಟೆಸ್ಟ್ ಚಾಂಪಿಯನ್ ಷಿಪ್ ನ ಅಂಕಪಟ್ಟಿಯಲ್ಲಿ ಭಾರತ ತಂಡ 2ನೇ ಸ್ಥಾನಕ್ಕೆ ಕುಸಿದಿದ್ದು, ಪಾಕಿಸ್ತಾನ ಅಗ್ರ ಸ್ಥಾನಕ್ಕೇರಿದೆ.

ರೋಹಿತ್ ಶರ್ಮಾ ನಾಯಕತ್ವದ ಭಾರತ ಟೆಸ್ಟ್ ತಂಡ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯ ಮಳೆಯಿಂದಾಗಿ ಡ್ರಾನಲ್ಲಿ ಅಂತ್ಯಗೊಂಡ ನಂತರ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಹೊಸ ಆವೃತ್ತಿ 2023-25ರ ಪ್ರಸ್ತುತ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಕುಸಿದಿದೆ. ವೆಸ್ಟ್ ಇಂಡೀಸ್ ವಿರುದ್ಧ ಭಾರತ 1-0 ಅಂತರದಲ್ಲಿ ಸರಣಿಯನ್ನು ಗೆದ್ದಿದ್ದರೂ, ಎರಡನೇ ಪಂದ್ಯ ಡ್ರಾಗೊಂಡ ಕಾರಣ, ಸರಣಿಯಲ್ಲಿ ಭಾರತ ತಂಡ ಕೇವಲ 16 ಅಂಕಗಳನ್ನು ಪಡೆದಿದೆ. ಎರಡು ಗೆಲುವುಗಳು ಬಂದಿದ್ದರೆ 24 ಅಂಕಗಳನ್ನು ಪಡೆಯುತ್ತಿತ್ತು.

ಎರಡು ಪಂದ್ಯಗಳ ನಂತರ ಭಾರತ ತಂಡದ ಗೆಲುವಿನ ಶೇಕಡಾವಾರು 66.67ರಷ್ಟು ಇದ್ದರೆ, ಪಾಕಿಸ್ತಾನದ ಶೇಕಡಾವಾರು 100ರಷ್ಟಿದೆ. ಪಾಕಿಸ್ತಾನ ಅಗ್ರಸ್ಥಾನದಲ್ಲಿ ಮುಂದುವರೆಯಬೇಕಾದರೆ ಎರಡನೇ ಪಂದ್ಯವನ್ನು ಗೆಲ್ಲಲೇಬೇಕಿದೆ.

ಇನ್ನು ಕೊಲಂಬೊದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್‌ ಪಂದ್ಯದಲ್ಲಿ 2-0 ಅಂತರದಲ್ಲಿ ಸ್ವೀಪ್ ಮಾಡುವ ಮೂಲಕ ಪಾಕಿಸ್ತಾನ ತಂಡವು ಅಗ್ರಸ್ಥಾನದಲ್ಲಿ ತಮ್ಮ ಮುನ್ನಡೆಯನ್ನು ಗಟ್ಟಿಗೊಳಿಸುವ ಅವಕಾಶವನ್ನು ಹೊಂದಿದೆ.  ಮತ್ತೊಂದೆಡೆ ಹಾಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆದ್ದಿರುವ ಆಸ್ಟ್ರೇಲಿಯಾ ತಂಡ ಪ್ರಸ್ತುತ ಇಂಗ್ಲೆಂಡ್ ವಿರುದ್ಧದ 2023ರ ಆಶಸ್ ಸರಣಿಯಲ್ಲಿ ಎರಡು ಪಂದ್ಯ ಗೆಲುವು, ಒಂದು ಸೋಲು ಮತ್ತು ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡು 26 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಭಾರತ ತಂಡವು ಮೊದಲ ಎರಡು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌ ಪಂದ್ಯದಲ್ಲಿ ಕ್ರಮವಾಗಿ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡು ಪ್ರಶಸ್ತಿ ವಂಚಿತವಾಗಿತ್ತು. 

SCROLL FOR NEXT