ಮುಂಬೈ: ಸಂಘಟಿತ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಯುಪಿ ವಾರಿಯರ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದ್ದು, ನೇರವಾಗಿ WPL ಫೈನಲ್ ಪ್ರವೇಶಿಸಿದೆ.
ಮಂಗಳವಾರ ಮುಂಬೈನ ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ನಡೆದ ಲೀಗ್ ಸುತ್ತಿನ ಕೊನೆಯ ಪಂದ್ಯದಲ್ಲಿ ಜಯ ದಾಖಲಿಸುವ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನಕ್ಕೇರಿ ನೇರವಾಗಿ ಫೈನಲ್ ಪ್ರವೇಶಿಸಿದೆ. ಕ್ರಮವಾಗಿ 2-3ನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ಹಾಗೂ ಯುಪಿ ವಾರಿಯರ್ಸ್ ಎಲಿಮಿನೇಟರ್ ಪಂದ್ಯದಲ್ಲಿ ಸೆಣಸಲಿವೆ. ಗೆದ್ದ ತಂಡ ಫೈನಲ್ ಪ್ರವೇಶಿಸಲಿದ್ದು, ಫೈನಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಲಿವೆ.
ಇದನ್ನೂ ಓದಿ: ಅಕ್ಟೋಬರ್ 5ರಿಂದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಆರಂಭ; ನವೆಂಬರ್ 19ರಂದು ಅಹ್ಮದಾಬಾದ್ ನಲ್ಲಿ ಫೈನಲ್ ಪಂದ್ಯ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಯುಪಿ ವಾರಿಯರ್ಸ್ ತಂಡವು 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 138 ರನ್ ಗಳಿಸಿತ್ತು. 139 ರನ್ ಗುರಿ ಪಡೆದ ಡೆಲ್ಲಿ 17.5 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಿ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಆರಂಭಿಕರಾಗಿ ಕಣಕ್ಕಿಳಿದ ನಾಯಕಿ ಮೆಗ್ ಲ್ಯಾನಿಂಗ್ (Meg Lanning), ಶಫಾಲಿ ವರ್ಮಾ ಉತ್ತಮ ಆರಂಭ ನೀಡಿದರು. ಶಫಾಲಿ 16 ಎಸೆತಗಳಲ್ಲಿ 4 ಬೌಂಡರಿಯೊಂದಿಗೆ 21 ರನ್ ಗಳಿಸಿದರೆ, ಮೆಗ್ ಲ್ಯಾನಿಂಗ್ 23 ಎಸತೆಗಳಲ್ಲಿ 39 ರನ್ (5 ಬೌಂಡರಿ, 2 ಸಿಕ್ಸರ್) ಗಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಅಲಿಸ್ ಕ್ಯಾಪ್ಸಿ 34 ರನ್ (4 ಬೌಂಡರಿ, 1 ಸಿಕ್ಸರ್) ಗಳಿಸಿದರೆ, ಆಲ್‌ರೌಂಡರ್ ಮಾರಿಜಾನ್ನೆ ಕಪ್ 31 ಎಸೆತಗಳಲ್ಲಿ 34 ರನ್ (4 ಬೌಂಡರಿ, 1 ಸಿಕ್ಸರ್) ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಇದನ್ನೂ ಓದಿ: ಭಾರತದ ಶ್ರೀಮಂತ ಸೆಲೆಬ್ರಿಟಿಗಳ ಪಟ್ಟಿ: ವಿರಾಟ್ ಕೊಹ್ಲಿ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ನಟ ರಣವೀರ್ ಸಿಂಗ್
ಇದಕ್ಕೂ ಮುನ್ನ ಬ್ಯಾಟ್ ಮಾಡಿದ 20 ಓವರ್‌ಗಳಲ್ಲಿ ಯುಪಿ ವಾರಿಯರ್ಸ್ ತಂಡ 6 ವಿಕೆಟ್ ಕಳೆದುಕೊಂಡು 138 ರನ್ ಗಳಿಸಿತು. ಈ ಪಂದ್ಯದಲ್ಲಿ ಯುಪಿ ವಾರಿಯರ್ಸ್ ಪರವಾಗಿ ತಹಿಲಾ ಮೆಕ್‌ಗ್ರಾಥ್ ಅಜೇಯ 58 ರನ್ ಗಳಿಸಿ ಏಕಾಂಗಿ ಹೋರಾಟ ನಡೆಸಿದರು. ಇದರೊಂದಿಗೆ ನಾಯಕಿ ಅಲಿಸ್ಸಾ ಹೀಲಿ ಅವರ 36 ರನ್‌ಗಳ ಕೊಡುಗೆ ತಂಡಕ್ಕೆ ನೆರವಾಯಿತು. ಉಳಿದಂತೆ ಯಾರೊಬ್ಬರೂ ಸ್ಥಿರವಾಗಿ ನಿಲ್ಲದ ಕಾರಣ ವಾರಿಯರ್ಸ್ ತಂಡ ಸಾಧಾರಣ ಮೊತ್ತವನ್ನಷ್ಟೇ ಗಳಿಸಲು ಶಕ್ತವಾಯಿತು.
ಡೆಲ್ಲಿ ಕ್ಯಾಪಿಟಲ್ಸ್ ಪರ ಬೌಲಿಂಗ್‌ನಲ್ಲಿ ಅಲಿಸ್ ಕ್ಯಾಪ್ಸಿ 3 ವಿಕೆಟ್ ಪಡೆದರೆ, ರಾಧಾ ಯಾದವ್ 2 ವಿಕೆಟ್, ಜೆಸ್ ಜೊನಾಸನ್ 1 ವಿಕೆಟ್ ಪಡೆದು ಮಿಂಚಿದರು.