ಭಾರತದ ಶ್ರೀಮಂತ ಸೆಲೆಬ್ರಿಟಿಗಳ ಪಟ್ಟಿ: ವಿರಾಟ್ ಕೊಹ್ಲಿ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ನಟ ರಣವೀರ್ ಸಿಂಗ್

ಭಾರತದ ಶ್ರೀಮಂತ ಅಥವಾ ಅತ್ಯಂತ ಮೌಲ್ಯಯುತ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ.
ಕೊಹ್ಲಿ ಮತ್ತು ರಣವೀರ್ ಸಿಂಗ್
ಕೊಹ್ಲಿ ಮತ್ತು ರಣವೀರ್ ಸಿಂಗ್

ನವದೆಹಲಿ: ಭಾರತದ ಶ್ರೀಮಂತ ಅಥವಾ ಅತ್ಯಂತ ಮೌಲ್ಯಯುತ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ.

ಸೆಲೆಬ್ರಿಟಿ ಬ್ರಾಂಡ್ ವಾಲ್ಯೂ ರಿಪೋರ್ಟ್ (Celebrity Brand Valuation Report) ವರದಿ ಮಾಡಿರುವಂತೆ ಖ್ಯಾತ ಬಾಲಿವುಡ್ ನಟ ರಣವೀರ್ ಸಿಂಗ್ 2022 ರಲ್ಲಿ ಭಾರತದ ಶ್ರೀಮಂತ ಸೆಲೆಬ್ರಿಟಿಯಾಗಿದ್ದು, ಈ ಹಿಂದೆ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ  ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ. ಕಾರ್ಪೊರೇಟ್ ತನಿಖೆ ಮತ್ತು ಅಪಾಯದ ಸಲಹಾ ಸಂಸ್ಥೆ ಕ್ರೋಲ್ ತನ್ನ ವರದಿಯೊಂದರಲ್ಲಿ ಇದನ್ನು ಬಹಿರಂಗಪಡಿಸಿದೆ. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಸತತ 5 ವರ್ಷಗಳ ಕಾಲ ಅಗ್ರಸ್ಥಾನದಲ್ಲಿದ್ದರು.

'ಸೆಲೆಬ್ರಿಟಿ ಬ್ರಾಂಡ್ ವ್ಯಾಲ್ಯುಯೇಶನ್ ರಿಪೋರ್ಟ್ 2022: ಬಿಯಾಂಡ್ ದಿ ಮೈನ್‌ಸ್ಟ್ರೀಮ್' ಎಂಬ ಶೀರ್ಷಿಕೆಯ ವರದಿಯ ಪ್ರಕಾರ, $ 181.7 ಮಿಲಿಯನ್ ಬ್ರ್ಯಾಂಡ್ ಮೌಲ್ಯದೊಂದಿಗೆ, ರಣವೀರ್ ಸಿಂಗ್ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ. ಟೀಂ ಇಂಡಿಯಾ ನಾಯಕ ಸ್ಥಾನದಿಂದ ಕೆಳಗಿಳಿದ ಬಳಿಕ ವಿರಾಟ್‌ ಕೊಹ್ಲಿ ಬ್ರ್ಯಾಂಡ್ ಮೌಲ್ಯ ಕಡಿಮೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ವರದಿಯ ಪ್ರಕಾರ, ನಾಯಕತ್ವ ತೊರೆದ ನಂತರ ವಿರಾಟ್ ಕೊಹ್ಲಿ 176.9 ಮಿಲಿಯನ್ ಡಾಲರ್ ಬ್ರಾಂಡ್ ಮೌಲ್ಯದೊಂದಿಗೆ ಈ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ತಲುಪಿದ್ದಾರೆ. 2020 ರಲ್ಲಿ, ವಿರಾಟ್ ಕೊಹ್ಲಿಯ ಬ್ರಾಂಡ್ ಮೌಲ್ಯವು $ 237 ಮಿಲಿಯನ್ ಆಗಿತ್ತು. ಆದರೆ ಇದು 2021 ರಲ್ಲಿ 185.7 ಮಿಲಿಯನ್ ಡಾಲರ್‌ಗೆ ತಲುಪಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

"ರಣವೀರ್ ಸಿಂಗ್ ಅವರು ಭಾರತದಲ್ಲಿ ಅತ್ಯಂತ ಮೌಲ್ಯಯುತವಾದ ಸೆಲೆಬ್ರಿಟಿ ಬ್ರ್ಯಾಂಡ್ ಆಗಿದ್ದಾರೆ, ಅವರ ಬೃಹತ್ ಅನುಮೋದನೆಯ ಬಂಡವಾಳ ಮತ್ತು ಜಾಗತಿಕ ಉಪಸ್ಥಿತಿಯನ್ನು ವಿಸ್ತರಿಸುತ್ತಿದ್ದಾರೆ" ಎಂದು ಮೌಲ್ಯಮಾಪನ ಸೇವೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅವಿರಾಲ್ ಜೈನ್ ಹೇಳಿದ್ದಾರೆ.

ಆಲಿಯಾ ಭಟ್ ಶ್ರೀಮಂತ ಮಹಿಳಾ ಸೆಲೆಬ್ರಿಟಿ
ಪಟ್ಟಿಯಲ್ಲಿ ನಟ ಅಕ್ಷಯ್ ಕುಮಾರ್ 153.6 ಮಿಲಿಯನ್ ಡಾಲರ್ ನೊಂದಿಗೆ ಮೂರನೇ ಸ್ಥಾನದಲ್ಲಿದ್ದು, ಈ ಪಟ್ಟಿಯಲ್ಲಿ RRR ಖ್ಯಾತಿಯ ನಟಿ ಆಲಿಯಾ ಭಟ್ 102.9 ಮಿಲಿಯನ್ ಡಾಲರ್ ಗಳಿಸಿ ನಾಲ್ಕನೇ ಸ್ಥಾನದಲ್ಲಿಗದ್ದು, ಮಹಿಳಾ ಸೆಲೆಬ್ರಿಟಿಗಳ ಪೈಕಿ ಅವರು ಅತ್ಯಂತ ಮೌಲ್ಯಯುತ ನಟಿಯಾಗಿ ಅಗ್ರಸ್ಥಾನದಲ್ಲಿದ್ದಾರೆ.  ದೀಪಿಕಾ ಪಡುಕೋಣೆ 82.9 ಮಿಲಿಯನ್ ಡಾಲರ್ ಬ್ರಾಂಡ್ ಮೌಲ್ಯದೊಂದಿಗೆ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದು, ಭಾರತದ ಕ್ರಿಕೆಟ್ ದಂತಕಥೆ ಎಂಎಸ್ ಧೋನಿ ಕೂಡ ಐದನೇ ಸ್ಥಾನದಲ್ಲಿದ್ದಾರೆ. ಅವರ ಬ್ರಾಂಡ್ ಮೌಲ್ಯ $80 ಮಿಲಿಯನ್. ಟಾಪ್ 10ರಲ್ಲಿ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಕೂಡ ಸ್ಥಾನ ಪಡೆದಿದ್ದು ಅವರ ಬ್ರಾಂಡ್ ಮೌಲ್ಯ $73.6 ಮಿಲಿಯನ್ ಆಗಿದೆ.

ಹಿರಿಯ ನಟ ಅಮಿತಾಭ್ ಬಚ್ಚನ್, ಹೃತಿಕ್ ರೋಷನ್ ಮತ್ತು ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಕೂಡ ಮೊದಲ ಹತ್ತು ಅತ್ಯಂತ ಮೌಲ್ಯಯುತ ಸೆಲೆಬ್ರಿಟಿಗಳಲ್ಲಿ ಸೇರಿದ್ದಾರೆ. 2023 ರಲ್ಲಿ ಪಠಾಣ್‌ ಸಕ್ಸಸ್ ಮೂಡ್ ನಲ್ಲಿರುವ ಶಾರುಖ್ ಖಾನ್, ಒಟ್ಟಾರೆ ಬ್ರಾಂಡ್ ಮೌಲ್ಯ USD 55.7 ಮಿಲಿಯನ್ ಮತ್ತು ಹತ್ತನೇ ಸ್ಥಾನದಲ್ಲಿದ್ದರೆ, ಸಲ್ಮಾನ್ ಖಾನ್ USD 54.5 ಮಿಲಿಯನ್ ಬ್ರ್ಯಾಂಡ್ ಮೌಲ್ಯದೊಂದಿಗೆ ಅವರ ಹಿಂದಿದ್ದಾರೆ. 2022 ರಲ್ಲಿ ಟಾಪ್ 25 ಸೆಲೆಬ್ರಿಟಿಗಳ ಒಟ್ಟಾರೆ ಬ್ರ್ಯಾಂಡ್ ಮೌಲ್ಯವನ್ನು $1.6 ಬಿಲಿಯನ್ ಎಂದು ಅಂದಾಜಿಸಲಾಗಿದೆ, 2021 ರಲ್ಲಿ ಇದು ಶೇ.29.1ರಷ್ಟು ಏರಿಕೆಯಾಗಿದೆ. 

RRR ನಂತಹ ದಕ್ಷಿಣದ ಚಲನಚಿತ್ರಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡುವುದರೊಂದಿಗೆ, ಟಾಲಿವುಡ್‌ನ ಸೆಲೆಬ್ರಿಟಿಗಳ ಬ್ರ್ಯಾಂಡ್ ಮೌಲ್ಯಗಳು 2022 ರಲ್ಲಿ ಏರಿಕೆಯಾಗಿದ್ದು, ಅಲ್ಲು ಅರ್ಜುನ್ (USD 31.4 ಮಿಲಿಯನ್) ಮತ್ತು ನಟಿ ರಶ್ಮಿಕಾ ಮಂದಣ್ಣ (USD 25.3 ಮಿಲಿಯನ್) ಅವರು ಭಾರತದ ಮೌಲ್ಯಯುತ ಟಾಪ್ 25 ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಸ್ಥಾನಪಡೆದಿದ್ದಾರೆ.

ಇನ್ನು ಕ್ರೀಡಾಲೋಕದಲ್ಲಿ ಜಾವೆಲಿನ್‌ ಥ್ರೋ ಸ್ಟಾರ್ ಆಟಗಾರ ನೀರಜ್ ಚೋಪ್ರಾ ಮತ್ತು  ಬ್ಯಾಡ್ಮಿಂಟನ್ ಆಟಗಾರ್ತಿ ಪಿ ವಿ ಸಿಂಧು USD 26.5 ಮಿಲಿಯನ್ ಡಾಲರ್ ಬ್ರ್ಯಾಂಡ್ ಮೌಲ್ಯದೊಂದಿಗೆ ಟಾಪ್ 25 ರಲ್ಲಿ ಸ್ಥಾನಪಡೆದಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com