ಕ್ರಿಕೆಟ್

ವಿಶ್ವಕಪ್ 2023: ಬೆಂಗಳೂರಿನಲ್ಲಿ ಪಾಕ್ ಗೆ ಒಲಿದ ಅದೃಷ್ಟ, ಕಿವೀಸ್ ವಿರುದ್ಧ 21 ರನ್ ಗೆಲುವು, ಸೆಮೀಸ್‌ ಆಸೆ ಜೀವಂತ!

Nagaraja AB

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯ 35ನೇ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಅದೃಷ್ಟ ಒಲಿದಿದ್ದು, ಡಕ್‌ವರ್ತ್‌ ಲೂಯಿಸ್‌ ನಿಯಮ ಬಳಸಿ ನ್ಯೂಜಿಲೆಂಡ್ ತಂಡವನ್ನು 21 ರನ್ ಗಳಿಂದ ಸೋಲಿಸಿದೆ. ಈ ಮೂಲಕ ಸೆಮಿಫೈನಲ್ ಆಸೆಯನ್ನು ಇನ್ನೂ ಜೀವಂತವಾಗಿರಿಸಿಕೊಂಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ 6 ವಿಕೆಟ್‌ ನಷ್ಟಕ್ಕೆ 401 ರನ್ ಗಳಿಸಿತ್ತು. ಕಿವೀಸ್ ಪರ ರಚಿನ್ ರವೀಂದ್ರ 108 ರನ್‌ಗಳ ಅದ್ಬುತ ಆಟ ಪ್ರದರ್ಶಿಸಿದರು. ಕಿವೀಸ್ ನೀಡಿದ 402 ರನ್ ಗಳ ಗೆಲುವಿನ ಬೆನ್ನಟ್ಟಿದ್ದ ಪಾಕಿಸ್ತಾನ ಆಡುವಾಗ ಎರಡು ಬಾರಿ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿತ್ತು.

ಆಟ ನಿಲ್ಲಿಸುವ ಹೊತ್ತಿಗೆ ಪಾಕಿಸ್ತಾನ 25.3 ಓವರ್‌ಗಳಲ್ಲಿ ಒಂದು ವಿಕೆಟ್‌ಗೆ 200 ರನ್ ಗಳಿಸಿತ್ತು. ನಾಯಕ ಬಾಬರ್ ಅಜಮ್ ಅಜೇಯ 66 ಹಾಗೂ ಪಾಕರ್ ಜಮಾನ್  ಅಜೇಯ 126 ರನ್ ಗಳಿಸಿದರು. ಕೊನೆಗೆ ಡಕ್‌ವರ್ತ್ ಲೂಯಿಸ್ ನಿಯಮದ ಪ್ರಕಾರ 21 ರನ್ ಗಳಿಂದ ಮುಂದಿದ್ದ ಪಾಕಿಸ್ತಾನವನ್ನು ವಿಜೇತರೆಂದು ಘೋಷಿಸಲಾಯಿತು. ಜಮಾನ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು. 

8-8 ಪಂದ್ಯಗಳ ನಂತರ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಎರಡೂ ತಂಡಗಳು 8-8 ಅಂಕಗಳನ್ನು ಹೊಂದಿವೆ. ಆದರೆ ನೆಟ್ ರನ್ ರೇಟ್ ನಿಂದಾಗಿ ನ್ಯೂಜಿಲೆಂಡ್ ನಾಲ್ಕನೇ ಸ್ಥಾನದಲ್ಲಿದ್ದು, ಪಾಯಿಂಟ್ ಪಟ್ಟಿಯಲ್ಲಿ ಪಾಕಿಸ್ತಾನ ತಂಡ 5ನೇ ಸ್ಥಾನದಲ್ಲಿದೆ.ಈ ಮೂಲಕ ಪಾಕಿಸ್ತಾನದ ಸೆಮಿ ಫೈನಲ್ ಪ್ರವೇಶದ ಕನಸು ಇನ್ನೂ ಜೀವಂತವಾಗಿದೆ.

SCROLL FOR NEXT