ಕ್ರಿಕೆಟ್

ವಿಶ್ವಕಪ್ 2023: ಭಾರತ- ಪಾಕಿಸ್ತಾನ ನಡುವೆ ಇಂದು ಹೈವೊಲ್ಟೇಜ್ ಪಂದ್ಯ! ಬಾಲಿವುಡ್ ಕಿಕ್, ಅಭಿಮಾನಿಗಳ ಕಾತರ

Nagaraja AB

ಅಹಮದಾಬಾದ್: ಸಾಂಪ್ರದಾಯಿಕ ಎದುರಾಳಿಯಾದ ಭಾರತ- ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣ ಇಂದು ಸಾಕ್ಷಿಯಾಗಲಿದೆ. ಬಾಲಿವುಡ್ ತಾರೆಯರನ್ನು ಒಳಗೊಂಡ ಸಂಗೀತ ಸಮಾರಂಭದೊಂದಿಗೆ ಪಂದ್ಯ ಪ್ರಾರಂಭವಾಗಲಿದೆ ಎಂದು ಹಲವು ಮಾಧ್ಯಮ ವರದಿಗಳು ತಿಳಿಸಿವೆ.

ಐಸಿಸಿ ವಿಶ್ವಕಪ್ 2023 ಆರಂಭದ ವೇಳೆ ಯಾವುದೇ ಸಮಾರಂಭವಿಲ್ಲದ ಕಾರಣ ಇಂದು ಬಾಲಿವುಡ್ ಗಾಯಕರಿಂದ ಸಂಗೀತ ಕಾರ್ಯಕ್ರಮ ಆಯೋಜನೆ ಮೂಲಕ ಅದನ್ನು ಸರಿದೂಗಿಸಲಾಗುತ್ತಿದೆ. ಪಂದ್ಯಾವಳಿಯ ಗೋಲ್ಡನ್ ಟಿಕೆಟ್ ಹೊಂದಿರುವವರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದು, ಮಧ್ಯಾಹ್ನ 12:40 ಕ್ಕೆ ಕಾರ್ಯಕ್ರಮ ಪ್ರಾರಂಭವಾಗುತ್ತದೆ.

ಗೋಲ್ಡನ್ ಟಿಕೆಟ್ ಹೊಂದಿರುವವರು ಯಾರು?: ಪಂದ್ಯಾವಳಿಯ ಆರಂಭದ ಸ್ವಲ್ಪ ಮುಂಚಿತವಾಗಿ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಅಕ್ಟೋಬರ್ 5 ರಂದು  ಅಮಿತಾಬ್ ಬಚ್ಚನ್, ರಜನಿಕಾಂತ್ ಮತ್ತು ಸಚಿನ್ ತೆಂಡೂಲ್ಕರ್ ಅವರಿಗೆ ಗೋಲ್ಡನ್ ಟಿಕೆಟ್‌ಗಳನ್ನು ನೀಡಿದರು. ತೆಂಡೂಲ್ಕರ್ ವಿಶ್ವಕಪ್ ರಾಯಬಾರಿ ಕೂಡ ಆಗಿದ್ದಾರೆ.

ಭಾರತ-ಪಾಕಿಸ್ತಾನದ ಯಾವುದೇ ಆಟವು ಯಾವಾಗಲೂ ಎಲ್ಲಾ ಕ್ಷೇತ್ರಗಳಿಂದ ಮೆಗಾಸ್ಟಾರ್‌ಗಳನ್ನು ಕ್ರೀಡಾಂಗಣಕ್ಕೆ ಆಕರ್ಷಿಸುತ್ತದೆ. ಹೀಗಾಗಿ, ಈ ಮಾರ್ಕ್ಯೂ ಘರ್ಷಣೆಗೆ, ಪಂದ್ಯಾವಳಿಯ ಅಧಿಕೃತ ಗೀತೆಯಲ್ಲಿ ಕಾಣಿಸಿಕೊಂಡಿರುವ ರಣವೀರ್ ಸಿಂಗ್ ಅವರಂತಹ ಬಾಲಿವುಡ್ ತಾರೆಗಳು ಪ್ರದರ್ಶನ ನೀಡಲಿದ್ದಾರೆ. ಅವರ ಜೊತೆಗೆ ನಟಿ ತಮನ್ನಾ ಭಾಟಿಯಾ ಮತ್ತು ಗಾಯಕ ಅರಿಜಿತ್ ಸಿಂಗ್ ಕೂಡ 1,30,000 ಆಸನಗಳ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕಿಕ್ಕೇರಿಸುವ ಸಾಧ್ಯತೆಯಿದೆ.

ಪಾಕಿಸ್ತಾನದ ಮಾಧ್ಯಮಗಳು ತಮ್ಮ ತಂಡದ ಮೊದಲ ಎರಡು ಪಂದ್ಯಗಳನ್ನು ಮತ್ತು ಇಡೀ ಪಂದ್ಯಾವಳಿಯ ಮೊದಲ 11 ಪಂದ್ಯಗಳನ್ನು ಕವರ್ ಮಾಡಲು ಸಾಧ್ಯವಾಗದ ಕಾರಣ ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಪಾಕ್ ಪಂದ್ಯಕ್ಕೆ ಅಂತಿಮವಾಗಿ ಲಭ್ಯವಿರಲಿದ್ದು, ಅವರಿಗೆ ವೀಸಾ ಸಿಕ್ಕಿದೆ ಎಂದು ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ​​(ಜಿಸಿಎ) ಕಾರ್ಯದರ್ಶಿ ಅನಿಲ್ ಪಟೇಲ್ ಖಚಿತಪಡಿಸಿದ್ದಾರೆ. 

ಪಂದ್ಯ ಏಕೆ ಮುಖ್ಯ?: ಭಾರತ ಮತ್ತು ಪಾಕಿಸ್ತಾನ ಎರಡೂ ತಮ್ಮ ಮೊದಲ ಎರಡು ಪಂದ್ಯಗಳನ್ನು ಗಮನಾರ್ಹವಾಗಿ ಗೆದ್ದಿರುವುದರಿಂದ ಪಂದ್ಯವು ಪಾಯಿಂಟ್‌ಗಳ ಪಟ್ಟಿಗೆ ನಿರ್ಣಾಯಕವಾಗಿದೆ. ಮೂರು ಪಂದ್ಯಗಳ ನಂತರ ಪಾಯಿಂಟ್ ಪಟ್ಟಿಯಲ್ಲಿ ಯಾರು ಹೆಚ್ಚಿನ ಸ್ಥಾನವನ್ನು ಪಡೆದುಕೊಳ್ಳುತ್ತಾರೆ ಎಂಬುದನ್ನು ನಿರ್ಧರಿಸಲು ಈ ಪಂದ್ಯ ಸಾಕಷ್ಟು ಪೈಪೋಟಿಗೆ ಕಾರಣವಾಗಲಿದ್ದು, ಟೂರ್ನಿಯಲ್ಲಿ ಮುನ್ನಡೆಯುತ್ತಿರುವ ತಂಡಕ್ಕೆ ಈ ಗೆಲುವು ಸ್ಥೈರ್ಯ ತುಂಬಲಿದೆ. ಪಂದ್ಯ ವೀಕ್ಷಣೆಗಾಗಿ ದೇಶ- ವಿದೇಶಗಳಿಂದ ಅಭಿಮಾನಿಗಳು ಈಗಾಗಲೇ ಸ್ಟೇಡಿಯಂನತ್ತ ಹೆಜ್ಜೆ ಹಾಕುತ್ತಿದ್ದಾರೆ. 

SCROLL FOR NEXT