ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ತಂಡದ ಇತರೆ ಸದಸ್ಯ ಯಶಸ್ವಿ ಜೈಸ್ವಾಲ್ ವಿರುದ್ಧ ಆಕ್ರೋಶಗೊಂಡ ಘಟನೆ ನಡೆದಿದೆ.
ಸರಣಿಯ 4ನೇ ಟೆಸ್ಟ್ ಪಂದ್ಯದ ಮೊದಲ ದಿನದಾಟ ಮುಕ್ತಾಯವಾಗಿದ್ದು, ಆಸ್ಟ್ರೇಲಿಯಾ 6 ವಿಕೆಟ್ ನಷ್ಟಕ್ಕೆ 311 ರನ್ ಗಳಿಸಿದೆ. ಆರಂಭದಿಂದಲೂ ಭಾರತ ತಂಡದ ವೇಗಿಗಳ ಮೇಲೆ ಸವಾರಿ ಮಾಡಿದ ಆಸಿಸ್ ದಾಂಡಿಗರು ರನ್ ಗಳ ಸುರಿಮಳೆ ಗೈದಿದ್ದರು.
ಒಂದು ಹಂತದಲ್ಲಿ ಭಾರತ ತಂಡದ ರೋಹಿತ್ ಶರ್ಮಾ ಕೂಡ ಇದರಿಂದ ಕೊಂಚ ವಿಚಲಿತರಾದಂತೆ ಕಂಡುಬಂದರು. ಇದೇ ವೇಳೆ ವಿಕೆಟ್ಗಾಗಿ ಕಾದು ಕಾದು ಹೈರಾಣಾಗಿದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ತಂಡದ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಮಾಡಿದ ತಪ್ಪಿಗೆ ಮೈದಾನದಲ್ಲೇ ಕೋಪಗೊಂಡಿದ್ದಾರೆ.
ಇದೇನ್ 'Gully cricket' ಏನೋ?
ಆಸ್ಟ್ರೇಲಿಯಾ ಪರ ಸ್ಟೀವ್ ಸ್ಮಿತ್ ಮತ್ತು ಮಾರ್ನಸ್ ಲಬುಶೇನ್ ಬ್ಯಾಟಿಂಗ್ ಮಾಡುತ್ತಿದ್ದಾಗ ರೋಹಿತ್, ಜೈಸ್ವಾಲ್ರನ್ನು ಸಿಲ್ಲಿ ಪಾಯಿಂಟ್ ಹಾಗೂ ಸಿಲ್ಲಿ ಮಿಡ್ ಆಫ್ ನಡುವೆ ಫಿಲ್ಡಿಂಗ್ಗೆ ನಿಯೋಜಿಸಿದ್ದರು. ಆದರೆ ಈ ವೇಳೆ ಕೊಂಚ ಎಚ್ಚರ ತಪ್ಪಿದ್ದ ಜೈಸ್ವಾಲ್, ಚೆಂಡು ಅವರ ಬಳಿ ಬರುವ ಮೊದಲೇ ಮೇಲಕ್ಕೆ ಜಿಗಿದರು. ಇದನ್ನು ನೋಡಿದ ರೋಹಿತ್ ಶರ್ಮಾ ಜೈಸ್ವಾಲ್‌ಗೆ, ‘ಹೇ ಜಸ್ಸು, ನೀನು ಬೀದಿ ಕ್ರಿಕೆಟ್ ಆಡುತ್ತಿದ್ದೀಯಾ? ಬ್ಯಾಟ್ಸ್‌ಮನ್ ಆಡುವವರೆಗೆ ಮೇಲೆ ಎದ್ದೇಳಬೇಡ ಎಂದಿದ್ದಾರೆ.
ಸ್ಟಂಪ್ ಮೈಕ್ ಆಡಿಯೋ ವೈರಲ್
ಲೈವ್ ಪಂದ್ಯದ ವೇಳೆ ಕೋಪಗೊಂಡಿರುವ ನಾಯಕ ರೋಹಿತ್, ಜೈಸ್ವಾಲ್ ವಿರುದ್ಧ ಗರಂ ಆಗಿ ಆಡಿರುವ ಮಾತುಗಳು ಸ್ಟಂಪ್ ಮೈಕ್ನಲ್ಲಿ ರೆಕಾರ್ಡ್ ಆಗಿದ್ದು, ಈ ವೀಡಿಯೊದಲ್ಲಿ ರೋಹಿತ್, ಜೈಸ್ವಾಲ್ ಅವರನ್ನು ಗಲ್ಲಿ ಕ್ರಿಕೆಟ್ ಆಡುತ್ತಿದ್ದೀಯಾ ಎಂದು ಗದರಿರುವುದು ಇದೀಗ ಸಖತ್ ವೈರಲ್ ಆಗುತ್ತಿದೆ.