ದಕ್ಷಿಣ ಆಫ್ರಿಕಾ ರೋಚಕ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿ ಮೊದಲ ಟೆಸ್ಟ್ ಅನ್ನು ಎರಡು ವಿಕೆಟ್‌ಗಳಿಂದ ಗೆದ್ದುಕೊಂಡಿತು. ಇದರೊಂದಿಗೆ ದಕ್ಷಿಣ ಆಫ್ರಿಕಾ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್-2025ರ ಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ಮೂಲಕ ಫೈನಲ್‌ಗೆ ಅರ್ಹತೆ ಪಡೆದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಗೆಲುವು ಟೀಂ ಇಂಡಿಯಾದ ಟೆನ್ಷನ್ ಕೂಡ ಹೆಚ್ಚಿದೆ. ದಕ್ಷಿಣ ಆಫ್ರಿಕಾ ಗೆಲ್ಲಲು 148 ರನ್ ಗಳಿಸಬೇಕಿತ್ತು. ಈ ಗುರಿಯು ಸುಲಭವಾಗಿತ್ತು. ಆದರೆ ಪಾಕಿಸ್ತಾನದ ಅತ್ಯುತ್ತಮ ಬೌಲಿಂಗ್ ದಾಳಿಗೆ ದಕ್ಷಿಣ ಆಫ್ರಿಕಾ ತತ್ತರಿಸಿತ್ತು. ಸೆಂಚುರಿಯನ್‌ನಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎಂಟು ವಿಕೆಟ್‌ಗಳನ್ನು ಕಳೆದುಕೊಂಡು ಗುರಿ ಮುಟ್ಟಿ ಫೈನಲ್‌ಗೆ ಅರ್ಹತೆ ಪಡೆದಿದೆ.
ಈ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ 11 ಪಂದ್ಯಗಳಲ್ಲಿ ಏಳು ಗೆಲುವು ಮತ್ತು ಮೂರು ಸೋಲುಗಳೊಂದಿಗೆ 88 ಅಂಕಗಳನ್ನು ಹೊಂದಿದೆ. ಅದರ ಗೆಲುವಿನ ಶೇಕಡಾವಾರು 66.67ರೊಂದಿಗೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾದ ಗೆಲುವಿನೊಂದಿಗೆ ಭಾರತದ ಚಿಂತೆ ಹೆಚ್ಚಿದೆ ಏಕೆಂದರೆ ಇದೀಗ ಒಂದೇ ಒಂದು ಸ್ಥಾನ ಉಳಿದಿದ್ದು ಅದಕ್ಕಾಗಿ ಆಸ್ಟ್ರೇಲಿಯಾ ಮತ್ತು ಭಾರತದ ನಡುವೆ ಹೋರಾಟ ನಡೆಯುತ್ತಿದೆ. ಆಸ್ಟ್ರೇಲಿಯ ತಂಡ 15 ಪಂದ್ಯಗಳಲ್ಲಿ ಒಂಬತ್ತು ಗೆಲುವು ಹಾಗೂ ನಾಲ್ಕು ಸೋಲುಗಳೊಂದಿಗೆ 106 ಅಂಕಗಳೊಂದಿಗೆ ಶೇ.58.89 ಗೆಲುವಿನ ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ ಟೀಮ್ ಇಂಡಿಯಾ 17 ಪಂದ್ಯಗಳಲ್ಲಿ ಒಂಬತ್ತು ಗೆಲುವು ಮತ್ತು 6 ಸೋಲುಗಳೊಂದಿಗೆ 114 ಅಂಕಗಳನ್ನು ಹೊಂದಿದೆ. ಆದರೆ ಟೀಂ ಇಂಡಿಯಾ ಗೆಲುವಿನ ಶೇಕಡಾವಾರು 55.88 ಆಗಿದೆ.
ಸದ್ಯ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್‌ನಲ್ಲಿ ನಾಲ್ಕನೇ ಟೆಸ್ಟ್ ಪಂದ್ಯವನ್ನಾಡುತ್ತಿದೆ. ಫೈನಲ್‌ಗೆ ಹೋಗಲು, ಈ ಪಂದ್ಯವನ್ನು ಗೆಲ್ಲುವುದು ಮತ್ತು ನಂತರ ಸಿಡ್ನಿಯಲ್ಲಿ ನಡೆಯಲಿರುವ ಕೊನೆಯ ಪಂದ್ಯವನ್ನು ಗೆಲ್ಲುವುದು ಅವಶ್ಯಕ. ಈ ಪಂದ್ಯಗಳಲ್ಲಿ ಒಂದಾದರೂ ಟೀಂ ಇಂಡಿಯಾ ಸೋತರೆ, ಫೈನಲ್‌ಗೆ ಹೋಗುವ ಅವಕಾಶ ಕಮರಿದಂತಾಗುತ್ತದೆ.
ಮೆಲ್ಬೋರ್ನ್ ಟೆಸ್ಟ್ ಪಂದ್ಯ ಮುಗಿಯಲು ಇನ್ನೂ ಒಂದು ದಿನ ಬಾಕಿ ಇದೆ. ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತಕ್ಕಿಂತ 333 ರನ್‌ಗಳ ಮುನ್ನಡೆ ಸಾಧಿಸಿದೆ. ಪಂದ್ಯವನ್ನು ಗೆಲ್ಲಲು ಅಥವಾ ಡ್ರಾ ಮಾಡಲು ಟೀಂ ಇಂಡಿಯಾಕ್ಕೆ ನಾಳೆ ಮಾತ್ರ ಬಾಕಿ ಇದೆ. ಆಸ್ಟ್ರೇಲಿಯಾ ತಂಡ ತನ್ನ ಮಾರಕ ಬೌಲಿಂಗ್ ಆಧಾರದ ಮೇಲೆ ಭಾರತವನ್ನು ಸೋಲಿಸಲು ತಯಾರಿ ನಡೆಸುತ್ತಿದೆ.