ಕ್ರಿಕೆಟ್

ವಿಂಡೀಸ್ ಕ್ರಿಕೆಟ್ ಗೆ ಶಾಕ್: ಮಹಿಳಾ ತಂಡದ 4 ಪ್ರಮುಖ ಆಟಗಾರ್ತಿಯರು ಒಂದೇ ದಿನ ನಿವೃತ್ತಿ ಘೋಷಣೆ!

Srinivasamurthy VN

ನವದೆಹಲಿ: ಜಾಗತಿಕ ಮಹಿಳಾ ಕ್ರಿಕೆಟ್ ಗೆ ವೆಸ್ಟ್ ಇಂಡೀಸ್ ತಂಡ ಶಾಕ್ ನೀಡಿದ್ದು, ತಂಡದ ನಾಲ್ಕು ಪ್ರಮುಖ ಆಟಗಾರ್ತಿಯರು ಒಂದೇ ದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ.

ವೆಸ್ಟ್ ಇಂಡೀಸ್ ಮಹಿಳಾ ತಂಡದ ಅನಿಸ್ಸಾ ಮೊಹಮ್ಮದ್, ಶಕೀರಾ ಸೆಲ್ಮನ್, ಕಯಾಸಿಯಾ ಮತ್ತು ಕೈಶೋನಾ ನೈಟ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್ ಹೇಳಿಕೆ ನೀಡಿದೆ. ಒಂದು ದೇಶದ ನಾಲ್ವರು ಆಟಗಾರ್ತಿಯರು ಏಕಕಾಲದಲ್ಲಿ ನಿವೃತ್ತಿ ಘೋಷಿಸುವುದು ಆಶ್ಚರ್ಯಕರವಾಗಿದೆ.

ವೆಸ್ಟ್ ಇಂಡೀಸ್ ಮಹಿಳಾ ತಂಡವು 2016 ರಲ್ಲಿ ಭಾರತದಲ್ಲಿ ಆಡಿದ ಟಿ20 ವಿಶ್ವಕಪ್ ಗೆದ್ದು ವಿಶ್ವ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ನಾಲ್ವರೂ ಈ ಐತಿಹಾಸಿಕ ವಿಜಯದ ಭಾಗವಾಗಿದ್ದರು. ಆ ಬಳಿಕ, ವೆಸ್ಟ್ ಇಂಡೀಸ್ ಮಹಿಳಾ ತಂಡವು ಮತ್ತೊಮ್ಮೆ ವಿಶ್ವ ಚಾಂಪಿಯನ್ ಆಗಲು ಸಾಧ್ಯವಾಗಿರಲಿಲ್ಲ.

ಆರ್ಥಿಕ ಮುಗ್ಗಟ್ಟಿನಲ್ಲಿರುವ ವಿಂಡೀಸ್ ಕ್ರಿಕೆಟ್ ಗೆ ಗಾಯದ ಮೇಲೆ ಬರೆ
ಇನ್ನು ಕ್ರಿಕೆಟ್ ಜಗತ್ತಿನಲ್ಲಿ ವೆಸ್ಟ್ ಇಂಡೀಸ್ ಸ್ಥಿತಿ ಚೆನ್ನಾಗಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಈ ದೇಶವು ಆರ್ಥಿಕ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿದೆ. ಈ ಕಾರಣಕ್ಕಾಗಿಯೇ ಈ ದೇಶದ ಅನೇಕ ಪುರುಷ ಆಟಗಾರರು ವಿಶ್ವದಾದ್ಯಂತ ಲೀಗ್‌ಗಳಲ್ಲಿ ಆಡಲು ಬಯಸುತ್ತಾರೆ. ಆದರೀಗ ವಿಂಡೀಸ್​ನ ನಾಲ್ಕು ಮಹಿಳಾ ಕ್ರಿಕೆಟಿಗರು ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಇದು ವಿಂಡೀಸ್ ತಂಡಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಹಿರಿಯ ಕ್ರಿಕೆಟ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

SCROLL FOR NEXT