ನವದೆಹಲಿ: ಇತ್ತೀಚೆಗೆ ಮುಕ್ತಾಯವಾದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಪ್ರಶಸ್ತಿ ಜಯಿಸಿದ್ದ ಭಾರತ ತಂಡಕ್ಕೆ ವೆಸ್ಟ್ ಇಂಡೀಸ್ ನಲ್ಲಿ ಸಂಕಷ್ಟ ಎದುರಾಗಿದ್ದು, Beryl ಚಂಡಮಾರುತ ಅಪ್ಪಳಿಸಿರುವ ಹಿನ್ನಲೆಯಲ್ಲಿ ಇಡೀ ತಂಡ ಅಲ್ಲಿಯೇ ಉಳಿದುಕೊಳ್ಳುವಂತಾಗಿದೆ.
ಹೌದು.. ವೆಸ್ಟ್ ಇಂಡೀಸ್ನ ಬಾರ್ಬಡೋಸ್ಗೆ ಬೆರಿಲ್ ಚಂಡಮಾರುತದಿಂದಾಗಿ (Hurricane Beryl) ಅಪ್ಪಳಿಸಿದ್ದು, ವಿಶ್ವಕಪ್ ಫೈನಲ್ ಪಂದ್ಯ ಮುಗಿದ ಮರುದಿನವೇ ಚಂಡಮಾರುತ ಅಪ್ಪಳಿಸಿದೆ. ಹೀಗಾಗಿ ವಿಶ್ವಕಪ್ ಗೆದ್ದು ಸಂಭ್ರಮದಲ್ಲಿರುವ ಭಾರತ ತಂಡ ತವರಿಗೆ ಮರಳಲು ಸಾಧ್ಯವಾಗದೇ ಸಂಕಷ್ಟಕ್ಕೆ ಸಿಲುಕಿದೆ.
ಬಾರ್ಬಡೋಸ್ ನಲ್ಲಿ ಸೂಕ್ತ ವ್ಯವಸ್ಥೆ ಇಲ್ಲ
ಇನ್ನು ಬೆರಿಲ್ ಚಂಡಮಾರುತದಿಂದಾಗಿ ಬಾರ್ಬಡೋಸ್ ನಲ್ಲೇ ಉಳಿದುಕೊಂಡಿರುವ ಟೀಂ ಇಂಡಿಯಾಗೆ ಉಳಿದುಕೊಳ್ಳಲು ಸೂಕ್ತ ವ್ಯವಸ್ಥೆ ಇಲ್ಲ ಎನ್ನಲಾಗಿದೆ. ಭಾರತೀಯ ತಂಡದ ಬಗ್ಗೆ ಬಿಸಿಸಿಐ ಹೊಸ ಅಪ್ಡೇಟ್ ನೀಡಿದ್ದು, ಟಿ 20 ವಿಶ್ವಕಪ್ 2024 ರ ಗೆಲುವಿನ ನಂತರ ಭಾರತಕ್ಕೆ ತೆರಳಬೇಕಿದ್ದ ಟೀಮ್ ಇಂಡಿಯಾ, ಚಂಡಮಾರುತದಿಂದಾಗಿ ಬಾರ್ಬಡೋಸ್ನಲ್ಲಿ ಸಿಲುಕಿಕೊಂಡಿದೆ ಎಂದು ಬರೆದುಕೊಂಡಿದೆ.
ಬಾರ್ಬಡೋಸ್ ನಿಂದ ಹೊರಹೋಗುವ ವಿಮಾನಗಳನ್ನು ಪ್ರತೀಕೂಲ ಹವಾಮಾನದಿಂದಾಗಿ ರದ್ದು ಪಡಿಸಲಾಗಿದ್ದು, ವಿಮಾನ ನಿಲ್ದಾಣವನ್ನೇ ಮುಚ್ಚಲಾಗಿದೆ ಎಂದು ಹೇಳಿದೆ.
ಹೊಟೆಲ್, ರೆಸ್ಟೋರೆಂಟ್ ಗಳೂ ಸ್ಥಗಿತ
ವಿಮಾನ ನಿಲ್ದಾಣ ಮಾತ್ರವಲ್ಲ, ಬಾರ್ಬಡೋಸ್ನ ಎಲ್ಲಾ ಹೋಟೆಲ್, ರೆಸ್ಟೋರೆಂಟ್ಗಳು ಮತ್ತು ಅಂಗಡಿಗಳನ್ನು ಸಹ ಮುಚ್ಚಲಾಗಿದೆ. ದೇಶದಲ್ಲಿ ತುರ್ತು ಪರಿಸ್ಥಿತಿಯಿಂದಾಗಿ ಭಾರತೀಯ ತಂಡ ಉಳಿದುಕೊಂಡಿರುವ ಹೋಟೆಲ್ ಪ್ರಸ್ತುತ ಸೀಮಿತ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ನಂಬಲಾಗಿದೆ. ಹೀಗಾಗಿ ಭಾರತ ತಂಡದ ಆಟಗಾರರಿಗೆ ಅತ್ಯಗತ್ಯ ಸೌಕರ್ಯಗಳು ಸಿಗುತ್ತಿಲ್ಲ.
ಆಟಗಾರರಿಗೆ ಪೇಪರ್ ಪ್ಲೇಟ್ ನಲ್ಲಿ ಊಟ?
ಇನ್ನು ಪ್ರಸ್ತುತ ಭಾರತ ತಂಡ ಉಳಿದುಕೊಂಡಿರುವ ಹೊಟೆಲ್ ಕೂಡ ಸ್ಥಗಿತವಾಗಿದೆಯಾದರೂ ಹೊಟೆಲ್ ನಲ್ಲಿರುವ ಭಾರತ ತಂಡಕ್ಕೆ ಸಿಬ್ಬಂದಿಕೊರತೆಯಿಂದಾಗಿ ಪೇಪರ್ ಪ್ಲೇಟ್ ನಲ್ಲಿ ಊಟ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಖ್ಯಾತ ಪತ್ರಕರ್ತ ಬೋರಿಯಾ ಮಜುಂದಾರ್ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದಾರೆ.
ಫೈನಲ್ ಮುಕ್ತಾಯದ ಬೆನ್ನಲ್ಲೇ ಚಾರ್ಟರ್ ವಿಮಾನದಲ್ಲಿ ಹೊರಟ ದಕ್ಷಿಣ ಆಫ್ರಿಕಾ ತಂಡ
ಇನ್ನು ಬಾರ್ಬಡೋಸ್ ನಲ್ಲಿ ಫೈನಲ್ ಪಂದ್ಯದ ಬಳಿಕ ದಕ್ಷಿಣ ಆಫ್ರಿಕಾ ತಂಡ ಚಾರ್ಟರ್ ವಿಮಾನದಲ್ಲಿ ತಮ್ಮ ದೇಶಕ್ಕೆ ಪಯಣ ಬೆಳೆಸಿತ್ತು. ಹೀಗಾಗಿ ಚಂಡಮಾರುತ ಅಪ್ಪಳಿಸುವ ಕೆಲವೇ ಗಂಟೆಗಳ ಮುನ್ನ ಆಫ್ರಿಕಾ ತಂಡ ಬಾರ್ಬಡೋಸ್ ತೊರೆದಿದ್ದು ಅದು ಸುರಕ್ಷಿತವಾಗಿ ತಮ್ಮ ತವರಿಗೆ ಸೇರಿದೆ ಎನ್ನಲಾಗಿದೆ. ಆದರೆ ಭಾರತ ಮಾತ್ರ ಬಾರ್ಬಡೋಸ್ ನಲ್ಲೇ ಉಳಿದುಕೊಂಡು ಸಂಕಷ್ಟ ಎದುರಿಸುವಂತಾಗಿದೆ.
ಭಾರತ ತಂಡವು ಜುಲೈ 1 ರಂದು ಹೊರಡಬೇಕಿತ್ತು. ಆದರೆ ಚಂಡಮಾರುತದಿಂದಾಗಿ ಬಾರ್ಬಡೋಸ್ ನ ಆಡಳಿತ ಹೆಚ್ಚಿನ ಎಚ್ಚರಿಕೆ ವಹಿಸಿತ್ತು. ವಿಮಾನ ನಿಲ್ದಾಣವನ್ನು ಸೋಮವಾರ ಮಧ್ಯಾಹ್ನದವರೆಗೆ (ಬಿಎಸ್ಟಿ) ಮುಚ್ಚಲಾಗುವುದು ಮತ್ತು ಚಂಡಮಾರುತ ಕಡಿಮೆಯಾದ ನಂತರವೇ ಅದನ್ನು ಮತ್ತೆ ತೆರೆಯಲಾಗುತ್ತದೆ. ಎಲ್ಲವೂ ಸುಧಾರಿಸಿಕೊಂಡ ನಂತರ ಭಾರತ ತಂಡ ಅಲ್ಲಿಂದ ಹೊರಡಬೇಕಾಗಿದೆ.
ಬಾರ್ಬಡೋಸ್ ಪ್ರಧಾನಿ ಮಿಯಾ ಮೊಟ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಚಂಡಮಾರುತದ ಅಬ್ಬರ ಕಡಿಮೆಯಾದ ಬಳಿಕ ಭಾರತ ಕ್ರಿಕೆಟ್ ತಂಡವನ್ನು ಸ್ವದೇಶಕ್ಕೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತದೆ. ಮುಂದಿನ 6 ರಿಂದ 10 ಗಂಟೆಯೊಳಗೆ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಮಾರಣಾಂತಿಕ ಬೆರಿಲ್ ಚಂಡಮಾರುತವು ಸೋಮವಾರ ಬಾರ್ಬಡೋಸ್ ಮತ್ತು ಹತ್ತಿರದ ದ್ವೀಪಗಳಿಗೆ ಅಪ್ಪಳಿಸಿದ್ದು, ಸುಮಾರು ಮೂರು ಲಕ್ಷ ಜನಸಂಖ್ಯೆಯನ್ನು ಹೊಂದಿರುವ ದ್ವೀಪರಾಷ್ಟ್ರದಲ್ಲಿ ಭಾನುವಾರ ಸಂಜೆಯಿಂದ ಅಘೋಷಿತ ಲಾಕ್‌ಡೌನ್ ಜಾರಿಯಲ್ಲಿದೆ.