ಎಡ್ಜ್ ಬಾಸ್ಟನ್: ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಸ್ಫೋಟಕ ಬ್ಯಾಟರ್ ಜೋ ರೂಟ್ ವಿಂಡೀಸ್ ಕ್ರಿಕೆಟ್ ದಂತಕಥೆ ಬ್ರಿಯಾನ್ ಲಾರಾ ದಾಖಲೆಯನ್ನು ಹಿಂದಿಕ್ಕಿದ್ದಾರೆ.
ಹೌದು.. ಎಡ್ಜ್ ಬಾಸ್ಟನ್ ನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ 3ನೇ ಟೆಸ್ಟ್ ಪಂದ್ಯದ 2ನೇ ದಿನವಾದ ಶನಿವಾರ ಇಂಗ್ಲೆಂಡ್ ಸ್ಟಾರ್ ಬ್ಯಾಟ್ಸ್ ಮನ್ ಜೋ ರೂಟ್ (Joe Root) ವೆಸ್ಟ್ ಇಂಡೀಸ್ ದಂತಕತೆ ಬ್ರಿಯಾನ್ ಲಾರಾ ಅವರನ್ನು ಹಿಂದಿಕ್ಕಿ ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ 7ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಈ ಪಂದ್ಯಕ್ಕೂ ಮುನ್ನ ಲಾರಾ ಅವರ ವೃತ್ತಿಜೀವನದಲ್ಲಿ ಗಳಿಸಿದ್ದ 11,953 ರನ್ ಳಿಗಿಂತ ಕೇವಲ 14 ರನ್ ಹಿಂದಿದ್ದ ರೂಟ್ ಮೊದಲ ದಿನ ಮುಕ್ತಾಯದ ವೇಳೆ ಅಜೇಯ 2 ರನ್ ಗಳಿಸಿ ಅಜೇಯರಾಗಿದ್ದರು. 2ನೇ ದಿನ ಬಾಕಿ 12ರನ್ ಗಳನ್ನು ಕಲೆ ಹಾಕಿ ಲಾರಾ ದಾಖಲೆಯನ್ನು ಹಿಂದಿಕ್ಕಿದರು. ಇದು ರೂಟ್ ವೃತ್ತಿಜೀವನದಲ್ಲಿ ಮತ್ತೊಂದು ಮಹತ್ವದ ಸಾಧನೆಯಾಗಿದೆ.
ಸಚಿನ್ ಅಗ್ರ ಸ್ಥಾನ ಅಬಾಧಿತ
ಇನ್ನು ಈ ಪಟ್ಟಿಯಲ್ಲಿ 15, 921ರನ್ ಗಳಿಸಿರುವ ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿ ಮುಂದುವರೆದಿದ್ದು, ಆಸ್ಟ್ರೇಲಿಯಾದ ರಿಕ್ಕಿ ಪಾಂಟಿಂಗ್ (13, 378)2ನೇ ಸ್ಥಾನ, ದಕ್ಷಿಣ ಆಫ್ರಿಕಾದ ಜಾಕ್ ಕಾಲಿಸ್ (13, 289 ರನ್) 3ನೇ ಸ್ಥಾನ, ಭಾರತದ ರಾಹುಲ್ ದ್ರಾವಿಡ್ (13, 288 ರನ್) 4ನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ರೂಟ್ ಲಾರಾರನ್ನು ಹಿಂದಿಕ್ಕಿ 7ನೇ ಸ್ಥಾನಕ್ಕೇರಿದ್ದಾರೆ.
ಫಾರ್ಮ್ಗೆ ಮರಳಿದ ರೂಟ್
ಈ ಪಂದ್ಯದಲ್ಲಿ ರೂಟ್ ಒಟ್ಟು 124 ಎಸೆತಗಳಲ್ಲಿ 87 ರನ್ ಗಳಿಸಿ ಮೊಟಿ ಬೌಲಿಂಗ್ ನಲ್ಲಿ ಎಲ್ ಬಿ ಬಲೆಗೆ ಬಿದ್ದರು. ಆ ಮೂಲಕ ಇಂಗ್ಲೆಂಡ್ನ ಮಾಜಿ ನಾಯಕ ಜೋ ರೂಟ್ ಟೆಸ್ಟ್ ಕ್ರಿಕೆಟ್ನಲ್ಲಿ ತಮ್ಮ ಫಾರ್ಮ್ ಗೆ ಮರಳಿದಂತಾಗಿದೆ. ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪ್ರಸ್ತುತ ಮೂರು ಪಂದ್ಯಗಳ ಸರಣಿಯಲ್ಲಿ, ಅವರು ಇಲ್ಲಿಯವರೆಗೆ ಒಂದು ಶತಕ ಮತ್ತು ಅರ್ಧಶತಕವನ್ನು ಗಳಿಸುವ ಮೂಲಕ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ.