ನ್ಯೂಯಾರ್ಕ್: ಅಮೆರಿಕಾದ ನ್ಯೂಯಾರ್ಕ್‌ನಲ್ಲಿ ಭಾನುವಾರ ನಡೆದ 2024ರ ಐಸಿಸಿ ಟಿ20 ವಿಶ್ವಕಪ್‌ನ 19ನೇ ಪಂದ್ಯದಲ್ಲಿ ಪಾಕಿಸ್ತಾನದ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತ 119 ರನ್ ಗಳಿಗೆ ಆಲೌಟ್ ಆಗುವ ಮೂಲಕ ಸಾಧರಣ ಮೊತ್ತ ಕಲೆ ಹಾಕಿದೆ.
ಇಂದು ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾ, 19 ಓವರ್‌ಗಳಲ್ಲಿ 119 ರನ್‌ಗಳಿಗೆ ಆಲೌಟ್ ಆಗಿದೆ. ಹೀಗಾಗಿ ಪಾಕಿಸ್ತಾನ ಗೆಲುವಿಗೆ 120 ರನ್‌ಗಳ ಅವಶ್ಯಕತೆ ಇದೆ.
ಭಾರತ ತಂಡದ ಬ್ಯಾಟಿಂಗ್ ತೀರಾ ಕಳಪೆಯಾಗಿತ್ತು. ಅಗ್ರ ಕ್ರಮಾಂಕ, ಮಧ್ಯಮ ಕ್ರಮಾಂಕ ಎಲ್ಲವೂ ವಿಫಲವಾಯಿತು. ಹೀಗಾಗಿ ತಂಡ 119 ರನ್‌ಗಳಿಗೆ ಆಲೌಟ್ ಆಯಿತು.
ಇನ್ನು ಪಾಕಿಸ್ತಾನ ಪರ ಮ್ಯಾಜಿಕ್ ಬೌಲಿಂಗ್ ಪ್ರದರ್ಶನ ಮಾಡಿದ ನಸೀಮ್ ಶಾ ಟೀಮ್ ಇಂಡಿಯಾ ಬ್ಯಾಟರ್‌ಗಳನ್ನು ರನ್ ಹೊಡೆಯದಂತೆ ಕಟ್ಟಿ ಹಾಕಿದರು.
ವಿರಾಟ್ ಕೊಹ್ಲಿ ಕೇವಲ 4 ರನ್ ಗಳಿಸಿ ಔಟ್ ಆದರೆ, ರೋಹಿತ್ ಶರ್ಮಾ 13 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ರಿಷಬ್ ಪಂತ್ ಮತ್ತು ಅಕ್ಸರ್ ಪಟೇಲ್ ನಿಧಾನವಾಗಿ ರನ್ ಕಲೆ ಹಾಕಿದರು.
ಪಾಕಿಸ್ತಾನ ಪರ ಹ್ಯಾರಿಸ್ ರೌಫ್ ಮತ್ತು ನಸೀಮ್ ಶಾ ತಲಾ 3 ವಿಕೆಟ್ ಕಬಳಿಸಿ ಸಂಭ್ರಮಿಸಿದರೆ, ಮೊಹಮ್ಮದ್ ಅಮೀರ್ 2 ವಿಕೆಟ್ ಹಾಗೂ ಶಾಹೀನ್ ಅಫ್ರಿದಿ 1 ವಿಕೆಟ್ ಪಡೆದರು.