ನ್ಯೂಯಾರ್ಕ್: ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ಮತ್ತು ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ನಡುವಿನ ಹೋಲಿಕೆಗಳು ಭಾರಿ ಸುದ್ದಿಗೆ ಗ್ರಾಸವಾಗುತ್ತಿರುವಂತೆಯೇ, ಬಾಬರ್ ಅಜಂ ಭಾರತದ ವಿರಾಟ್ ಕೊಹ್ಲಿಯ ಕಾಲಿನ ಚಪ್ಪಲಿಗೂ ಸಮವಿಲ್ಲ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಹೌದು.. 2024 ರ ಟಿ 20 ವಿಶ್ವಕಪ್ ಪಂದ್ಯದಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ (USA) ವಿರುದ್ಧ 44 ರನ್ ಗಳಿಸಿದ್ದ ಪಾಕ್ ತಂಡದ ನಾಯಕ ಬಾಬರ್ ಅಜಮ್ (Babar Azam) ಟಿ 20 ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿರಾಟ್ ಕೊಹ್ಲಿ ಅವರ ದಾಖಲೆ ಮುರಿದಿದ್ದಾರೆ.
ಪಾಕಿಸ್ತಾನಿ ಕ್ರಿಕೆಟ್ ಪ್ರಿಯರು ಮತ್ತು ಅವರ ಅಭಿಮಾನಿಗಳು ಈ ಮೈಲಿಗಲ್ಲಿನ ಬಗ್ಗೆ ಸಂಭ್ರಮಿಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿರಾಟ್ ಕೊಹ್ಲಿ ಮತ್ತು ಬಾಬರ್ ಅಜಂ ವೃತ್ತಿ ಜೀವನದ ಅಂಕಿ ಅಂಶಗಳನ್ನು ಹೋಲಿಕೆ ಮಾಡುತ್ತಿದ್ದಾರೆ. ಕ್ರಿಕೆಟ್ ವಲಯದಲ್ಲೂ ಈ ಬಗ್ಗೆ ವ್ಯಾಪಕ ಚರ್ಚೆಗಳಾಗುತ್ತಿದೆ. ಆದರೆ ಪಾಕಿಸ್ತಾನ ಮಾಜಿ ಕ್ರಿಕೆಟಿಗ ದನಿಶ್ ಕನೇರಿಯಾ ಮಾತ್ರ ಬಾಬರ್ ಅಜಂ ಭಾರತದ ವಿರಾಟ್ ಕೊಹ್ಲಿಯ ಚಪ್ಪಲಿಗೂ ಸಮವಲ್ಲ ಎಂದು ಕಿಡಿಕಾರಿದ್ದಾರೆ.
2024ರ ಟಿ 20 ವಿಶ್ವಕಪ್ ನಲ್ಲಿ ಇಂದು ಪಾಕಿಸ್ತಾನವು ಭಾರತ ತಂಡವನ್ನು ಎದುರಿಸುತ್ತಿದ್ದು, ಇದೇ ಸಂದರ್ಭದಲ್ಲಿ ಪಾಕಿಸ್ತಾನದ ಮಾಜಿ ಸ್ಪಿನ್ನರ್ ದಾನಿಶ್ ಕನೇರಿಯಾ ಮತ್ತೆ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪಾಕಿಸ್ತಾನದ ನಾಯಕನನ್ನು ಭಾರತದ ಸ್ಟಾರ್ ಬ್ಯಾಟರ್ಗಳಿಗೆ ಕೊಹ್ಲಿಗೆ ಹೋಲಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಅವರು, ಭಾರತೀಯ ದಂತಕಥೆಗೆ ವಿರಾಟ್ ಕೊಹ್ಲಿಗೆ ಬಾಬರ್ ಅಜಂ ಕನಿಷ್ಠ ಹತ್ತರವೂ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಅಮೆರಿಕ ತಂಡದ ವಿರುದ್ಧ ಪಾಕಿಸ್ತಾನ ತಂಡದ ಕಳಪೆ ಪ್ರದರ್ಶನವನ್ನು ಟೀಕಿಸಿದ ಕನೇರಿಯಾ, ''ಬಾಬರ್ ಅಜಂ ಶತಕ ಬಾರಿಸಿದ ಕೂಡಲೇ ನೀವು ವಿರಾಟ್ ಕೊಹ್ಲಿಯೊಂದಿಗೆ ಹೋಲಿಕೆಗಳನ್ನು ಮಾಡುತ್ತೀರಿ. ಬಾಬಾರ್ ಅಜಂ ವಿರಾಟ್ ಕೊಹ್ಲಿಯ ಚಪ್ಪಲಿಗೂ ಸಮವಲ್ಲ. ದೊಡ್ಡ ಬೌಲರ್ಗಳನ್ನು ಎದುರಿಸುವ ಸಾಮರ್ಥ್ಯ ಇಲ್ಲ. ಉತ್ತಮ ಬೌಲರ್ಗಳಿಗೆ ರನ್ ಗಳಿಸಲು ಸಾಧ್ಯವಾಗುವುದಿಲ್ಲ.
ಅಮೆರಿಕದ ಬಲಿಷ್ಠ ಬೌಲಿಂಗ್ ವಿರುದ್ಧವೇ 40 ರನ್ಗೆ ಔಟಾಗಿದ್ದಾರೆ. ಕೊಹ್ಲಿಯ ರೀತಿ ಉತ್ತಮ ಆಟಗಾರನಾಗಿದ್ದರೆ ಕ್ರೀಸ್ನಲ್ಲಿ ಉಳಿದು ಆಟವನ್ನು ಗೆಲ್ಲಬೇಕಾಗಿತ್ತು. ಪಾಕಿಸ್ತಾನ ಏಕಪಕ್ಷೀಯವಾಗಿ ಪಂದ್ಯವನ್ನು ಗೆಲ್ಲಬೇಕಿತ್ತು ಎಂದು ಕನೇರಿಯಾ ಹೇಳಿದ್ದಾರೆ.
ಭಾರತವನ್ನು ಸೋಲಿಸುವ ಸಾಮರ್ಥ್ಯ ಪಾಕ್ ತಂಡಕ್ಕಿಲ್ಲ
ಭಾರತ ತಂಡವು ಪಾಕಿಸ್ತಾನವನ್ನು ಕೆಟ್ಟದಾಗಿ ಸೋಲಿಸುತ್ತದೆ. ಪಾಕಿಸ್ತಾನ ಭಾರತವನ್ನು ಸೋಲಿಸುವ ಸಾಮರ್ಥ್ಯ ಹೊಂದಿಲ್ಲ. ಪಾಕಿಸ್ತಾನ ವಿಶ್ವಕಪ್ಗೆ ಬಂದಾಗಲೆಲ್ಲಾ ತಮ್ಮ ಬೌಲಿಂಗ್ ಘಟಕವನ್ನು ಶ್ಲಾಘಿಸುತ್ತಲೇ ಇರುತ್ತಾರೆ. ಅದರೆ, ಅವರ ಬೌಲಿಂಗ್ ಅನ್ನು ಸಲೀಸಾಗಿ ಎದುರಿಸಲು ಸಾಧ್ಯ ಎಂದು ಕನೇರಿಯಾ ಹೇಳಿದ್ದಾರೆ.