ಬೆಂಗಳೂರು: ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಏಕದಿನ ಕ್ರಿಕೆಟ್ ಪಂದ್ಯದಲ್ಲೂ ಭಾರತ ವನಿತೆಯರ ತಂಡ 6 ವಿಕೆಟ್ ಗಳ ಭರ್ಜರಿ ಜಯ ದಾಖಲಿಸುವ ಮೂಲಕ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾರತ ಮಹಿಳಾ ತಂಡ ಹಾಗೂ ದಕ್ಷಿಣ ಆಫ್ರಿಕಾ ಮಹಿಳಾ ತಂಡಗಳ ನಡುವಿನ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಆತಿಥೇಯ ಟೀಂ ಇಂಡಿಯಾ 6 ವಿಕೆಟ್ಗಳ ಸುಲಭ ಜಯ ದಾಖಲಿಸಿದೆ.
ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯನ್ನು 3-0 ಅಂತರದಿಂದ ವಶಪಡಿಸಿಕೊಂಡಿದೆ. ಈ ಪಂದ್ಯಕ್ಕೂ ಮುನ್ನ ನಡೆದಿದ್ದ ಮೊದಲೆರಡು ಪಂದ್ಯಗಳಲ್ಲೂ ಟೀಂ ಇಂಡಿಯಾ, ಆಫ್ರಿಕಾ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾಗಿತ್ತು. ಇದೀಗ ಮೂರನೇ ಪಂದ್ಯಗೆದ್ದು ಸರಣಿ ಕ್ಲೀನ್ ಸ್ವೀಪ್ ಮಾಡಿದೆ.
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ 50 ಓವರ್‌ಗಳಲ್ಲಿ 215 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಈ ಸಾಧಾರಣ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಸ್ಮೃತಿ ಮಂಧಾನ ಅವರ 90 ರನ್ಗಳ ನೆರವಿನಿಂದ ಇನ್ನು 56 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ದಡ ಮುಟ್ಟಿತು. ಸತತ 2 ಪಂದ್ಯಗಳಲ್ಲಿ ಶತಕ ಸಿಡಿಸಿದ್ದ ಸ್ಮೃತಿ ಮಂಧಾನ ಮೂರನೇ ಪಂದ್ಯದಲ್ಲೂ ಶತಕ ಸಿಡಿಸಿ ಹ್ಯಾಟ್ರಿಕ್ ಸಾಧನೆ ಮಾಡುವ ವಿಶ್ವಾಸದಲ್ಲಿದ್ದರು. ಆದರೆ 90ರನ್ ಗಳಿಸಿದ್ದಾಗ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದರು.
ನಾಯಕಿ ಹರ್ಮನ್ ಪ್ರೀತ್ ಕೌರ್ ಕೂಡ 48 ಎಸೆತಗಳಲ್ಲಿ 42 ರನ್ ಗಳಿಸಿ ಭಾರತದ ಗೆಲುವನ್ನು ಸುಗಮವಾಗಿಸಿದರು. ಮಧ್ಯಮ ಕ್ರಮಾಂಕದಲ್ಲಿ ಜೆಮಿನಾ ರೋಡ್ರಿಗಸ್ (ಅಜೇಯ 19 ರನ್) ಮತ್ತು ರಿಚಾ ಘೋಷ್ (ಅಜೇಯ 6 ರನ್) ಗೆಲುವಿನ ಔಪಚಾರಕತೆ ಮುಗಿಸಿದರು.
2 ವಿಕೆಟ್ ಪಡೆದ ದೀಪ್ತಿ ಶರ್ಮಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರೆ ಸತತ ಶತಕ ಸಿಡಿಸಿದ ಸ್ಮೃತಿ ಮಂಧಾನ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.