ಐಸಿಸಿ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿದ ನಂತರ ನಾಯಕ ರೋಹಿತ್ ಶರ್ಮಾ ತುಂಬಾ ಭಾವನಾತ್ಮಕವಾಗಿ ಕಾಣಿಸಿಕೊಂಡರು. ಪಂದ್ಯದ ನಂತರ, ಎಲ್ಲಾ ಆಟಗಾರರು ಡ್ರೆಸ್ಸಿಂಗ್ ರೂಮ್‌ಗೆ ಹಿಂತಿರುಗುತ್ತಿದ್ದಾಗ, ರೋಹಿತ್ ಹೊರಗೆ ಇರಿಸಲಾದ ಕುರ್ಚಿಯ ಮೇಲೆ ಕುಳಿತು ಕಣ್ಣೀರು ಹಾಕಿದರು.
ಅಲ್ಲದೆ ರೋಹಿತ್ ತನ್ನ ಎಡಗೈಯಿಂದ ತನ್ನ ಮುಖವನ್ನು ಮರೆಮಾಡಲು ಪ್ರಯತ್ನಿಸಿದರು. ಈ ವೇಳೆ ಅಲ್ಲಿಗೆ ಬಂದ ವಿರಾಟ್ ಕೊಹ್ಲಿ ರೋಹಿತ್ ಜೊತೆ ಕೈಕುಲುಕಲು ಬಯಸುತ್ತಾರೆ. ಆದರೆ ರೋಹಿತ್ ಭಾವನೆಗಳಲ್ಲಿ ಮುಳುಗಿದ್ದನ್ನು ನೋಡಿ ವಿರಾಟ್ ಒಳ ಹೋಗುತ್ತಾರೆ. ಅದೇ ಸಮಯದಲ್ಲಿ ಸೂರ್ಯಕುಮಾರ್ ಯಾದವ್ ರೋಹಿತ್ ತೊಡೆ ತಟ್ಟಿ ಸಮಾಧಾನ ಪಡಿಸಲು ಪ್ರಯತ್ನಿಸಿದರು.
ನಾಯಕ ರೋಹಿತ್ ಶರ್ಮಾ (57 ರನ್) ಅವರ ಅರ್ಧಶತಕದ ನಂತರ ಭಾರತ ಗುರುವಾರ ಇಲ್ಲಿ ನಡೆದ ಮಳೆ ಬಾಧಿತ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಅನ್ನು 68 ರನ್‌ಗಳಿಂದ ಸೋಲಿಸುವ ಮೂಲಕ ಟಿ20 ವಿಶ್ವಕಪ್ ಫೈನಲ್‌ಗೆ ಪ್ರವೇಶಿಸಿದೆ. ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. ಇನ್ನು ಫೈನಲ್ ಪಂದ್ಯದಲ್ಲಿ ಭಾರತ ಶನಿವಾರ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.
2007ರಲ್ಲಿ ಟೂರ್ನಿಯ ಆರಂಭಿಕ ಹಂತದ ಚಾಂಪಿಯನ್ ಆಗಿದ್ದ ಭಾರತ ತಂಡ ಈ ಮೂಲಕ ಮೂರನೇ ಬಾರಿಗೆ ಟಿ20 ವಿಶ್ವಕಪ್ ಫೈನಲ್ ತಲುಪಿದೆ. ಈ ಗೆಲುವಿನೊಂದಿಗೆ ಭಾರತ 2022ರ ಈ ಟೂರ್ನಿಯ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧದ 10 ವಿಕೆಟ್‌ಗಳ ಸೋಲಿಗೆ ಸೇಡು ತೀರಿಸಿಕೊಂಡಿದೆ. ರೋಹಿತ್ (39 ಎಸೆತ, ಆರು ಬೌಂಡರಿ, 2 ಸಿಕ್ಸರ್) ಅರ್ಧಶತಕ ಮತ್ತು ಸೂರ್ಯಕುಮಾರ್ ಯಾದವ್ (39 ಎಸೆತ, 6 ಬೌಂಡರಿ, 2 ಸಿಕ್ಸರ್) ಅವರ 47 ರನ್ ಮೂರನೇ ವಿಕೆಟ್‌ಗೆ 73 ರನ್ ಜೊತೆಯಾಟದ ನೆರವಿನಿಂದ ಭಾರತ ತಂಡವು ಕಷ್ಟಕರವಾದ ಪಿಚ್‌ನಲ್ಲಿ ಏಳು ವಿಕೆಟ್‌ಗೆ 171 ರನ್‌ಗಳ ಸವಾಲಿನ ಸ್ಕೋರ್ ಗಳಿಸಿತು.
172 ರನ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ ಭಾರತೀಯ ಸ್ಪಿನ್ನರ್ ಗಳ ದಾಳಿಗೆ ತತ್ತರಿಸಿದೆ. ಸ್ಪಿನ್ನರ್‌ಗಳಾದ ಅಕ್ಷರ್ ಪಟೇಲ್ (23 ರನ್‌ಗಳಿಗೆ ಮೂರು ವಿಕೆಟ್‌ಗಳು) ಮತ್ತು ಕುಲದೀಪ್ (19 ರನ್‌ಗಳಿಗೆ ಮೂರು ವಿಕೆಟ್‌ಗಳು) ಅದ್ಭುತ ಪ್ರದರ್ಶನದಿಂದ ಇಂಗ್ಲೆಂಡ್ ತಂಡವನ್ನು ಕೇವಲ 16.4 ಓವರ್‌ಗಳಲ್ಲಿ 103 ರನ್‌ಗಳಿಗೆ ಆಲೌಟ್ ಆಯಿತು. ಜಸ್ಪ್ರೀತ್ ಬುಮ್ರಾ 2.4 ಓವರ್‌ಗಳಲ್ಲಿ 12 ರನ್ ನೀಡಿ ಎರಡು ವಿಕೆಟ್ ಪಡೆದರು. ಇಂಗ್ಲೆಂಡ್ ಪರ ನಾಯಕ ಜೋಸ್ ಬಟ್ಲರ್ (23), ಹ್ಯಾರಿ ಬ್ರೂಕ್ (25), ಜೋಫ್ರಾ ಆರ್ಚರ್ (21) ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್ (11) ಮಾತ್ರ ಎರಡಂಕಿ ತಲುಪಲು ಸಾಧ್ಯವಾಯಿತು.