ಅಹ್ಮದಾಬಾದ್: ಹಾಲಿ ಐಪಿಎಲ್ ಟೂರ್ನಿಯಲ್ಲಿ ಬ್ಯಾಟರ್ ಗಳ ಅಬ್ಬರ ಮುಂದವೆರೆದಿದ್ದು, ಚೆನ್ನೈ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಗುಜರಾತ್ ಟೈಟನ್ಸ್ ತಂಡದ ಬ್ಯಾಟರ್ ಸಾಯಿಸುದರ್ಶನ್ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಮತ್ತು ರುತುರಾಜ್ ಗಾಯಕ್ವಾಡ್ ರ ದಾಖಲೆ ಮುರಿದಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅತಿ ವೇಗದಲ್ಲಿ 1000 ರನ್ ಗಳಿಸಿದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಸಾಯಿ ಸುದರ್ಶನ್ ಪಾತ್ರರಾಗಿದ್ದು, ಶುಕ್ರವಾರ ಅಹ್ಮದಾಬಾದ್ ನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.
ಗುಜರಾತ್ ಇನ್ನಿಂಗ್ಸ್ ನ11 ನೇ ಓವರ್ನಲ್ಲಿ ಸಿಎಸ್ಕೆ ವೇಗಿ ಸಿಮರ್ಜೀತ್ ಸಿಂಗ್ ಅವರಿಗೆ ಸತತ ಸಿಕ್ಸರ್ ಬಾರಿಸಿದ ಸಾಯಿ ಸುದರ್ಶನ್ ಐಪಿಎಲ್ನಲ್ಲಿ 1000 ರನ್ಗಳ ಗಡಿ ದಾಟಿದರು. ಈ ವೇಳೆ 38 ಎಸೆತಗಳಲ್ಲಿ 71 ರನ್ ಗಳಿಸಿದ್ದರು. ಈ ಪಂದ್ಯದಲ್ಲಿ ಅವರು 51 ಎಸೆತದಲ್ಲಿ 104 ರನ್ ಬಾರಿಸಿದರು.
ಸಾಯಿ ಸುದರ್ಶನ್ ಕೇವಲ 25 ಇನ್ನಿಂಗ್ಸ್ಗಳಲ್ಲಿ 1000 ರನ್ ಪೂರೈಸಿದ ಸಾಧನೆ ಮಾಡಿದ್ದು, ಈ ದಾಖಲೆ ಮೂಲಕ ಅವರು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಮತ್ತು ಋತುರಾಜ್ ಗಾಯಕ್ವಾಡ್ ಅವರ ದಾಖಲೆ ಮುರಿದಿದ್ದಾರೆ. ಸಚಿನ್ ತೆಂಡೂಲ್ಕರ್ ಮತ್ತು ಗಾಯಕ್ವಾಡ್ ಇಬ್ಬರೂ ತಲಾ 31 ಇನ್ನಿಂಗ್ಸ್ಗಳಲ್ಲಿ 1000 ರನ್ ಪೂರೈಸಿದ್ದರು.
ಐಪಿಎಲ್ನಲ್ಲಿ 30 ಇನ್ನಿಂಗ್ಸ್ಗಿಂತ ಕಡಿಮೆ ಅವಧಿಯಲ್ಲಿ 1000 ರನ್ ಪೂರೈಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಗುಜರಾತ್ ಬ್ಯಾಟರ್ ಪಾತ್ರರಾಗಿದ್ದಾರೆ. ಆಸ್ಟ್ರೇಲಿಯಾ ಮತ್ತು ಪಂಜಾಬ್ ಕಿಂಗ್ಸ್ನ ಮಾಜಿ ಬ್ಯಾಟರ್ ಶಾನ್ ಮಾರ್ಷ್ 21 ಇನ್ನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿದ್ದರೆ, ವೆಸ್ಟ್ ಇಂಡೀಸ್ನ ಮಾಜಿ ಬ್ಯಾಟರ್ ಲೆಂಡ್ಲ್ ಸಿಮನ್ಸ್ 23 ಇನ್ನಿಂಗ್ಸ್ಗಳಲ್ಲಿ ಈ ಮೈಲಿಗಲ್ಲು ಸಾಧಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಸಾಯಿ ಸುದರ್ಶನ್ ಮತ್ತು ಮ್ಯಾಥ್ಯೂ ಹೇಡನ್ ಜಂಟಿಯಾಗಿ ಮೂರನೇ ಸ್ಥಾನದಲ್ಲಿದ್ದಾರೆ.