ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ನೇ ಆವೃತ್ತಿಯ ಪಂದ್ಯದ ವೇಳೆ ಎಂಎಸ್ ಧೋನಿ ಅವರನ್ನು ಭೇಟಿ ಮಾಡಲು ಮೈದಾನಕ್ಕೆ ನುಗ್ಗಿದ ನಂತರ ಕ್ರಿಮಿನಲ್ ಅತಿಕ್ರಮಣ ಮತ್ತು ಅಕ್ರಮ ಪ್ರವೇಶಕ್ಕಾಗಿ ಕಾಲೇಜು ವಿದ್ಯಾರ್ಥಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಶುಕ್ರವಾರ ನಡೆದ ಗುಜರಾತ್ ಟೈಟಾನ್ಸ್ (ಜಿಟಿ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ನಡುವಿನ ಪಂದ್ಯದ ವೇಳೆ ಈ ಘಟನೆ ಸಂಭವಿಸಿದೆ.
ಆರೋಪಿ ವಿದ್ಯಾರ್ಥಿ ವಿರುದ್ಧ ಅತಿಕ್ರಮ ಮತ್ತು ಅಕ್ರಮ ಪ್ರವೇಶ ಪ್ರಕರಣ ದಾಖಲಿಸಲಾಗಿದೆ ಎಂದು ಅಹಮದಾಬಾದ್ ಎಸಿಪಿ ದಿಗ್ವಿಜಯ್ ಸಿಂಗ್ ರಾಣಾ ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
'ಶುಕ್ರವಾರ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಐಪಿಎಲ್ ಪಂದ್ಯದ ವೇಳೆ ಕಾಲೇಜು ವಿದ್ಯಾರ್ಥಿಯೊಬ್ಬ ಮೈದಾನಕ್ಕೆ ಹಾರಿ ಪಿಚ್ ಕಡೆಗೆ ಓಡಲು ಆರಂಭಿಸಿದ. ಪಂದ್ಯದ ವೇಳೆ ವಿರಾಮವಿತ್ತು. ಆರೋಪಿ ಮಹೇಂದ್ರ ಸಿಂಗ್ ಧೋನಿ ಅವರನ್ನು ಭೇಟಿ ಮಾಡಲು ಯೋಚಿಸಿದ್ದ. ಕಾನ್ಸ್‌ಟೇಬಲ್‌ಗಳು ಸ್ಥಳದಲ್ಲೇ ಆತನನ್ನು ಬಂಧಿಸಿದ್ದಾರೆ' ಎಂದು ಎಸಿಪಿ ರಾಣಾ ತಿಳಿಸಿದ್ದಾರೆ.
'ಪ್ರಾಥಮಿಕ ತನಿಖೆಯಲ್ಲಿ, ಆತನಿಗೆ ಬೇರೆ ಯಾವುದೇ ಉದ್ದೇಶಗಳಿರಲಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ. ಪಂದ್ಯದ ವೇಳೆ ಅತಿಕ್ರಮಣ ಮತ್ತು ಅಕ್ರಮ ಪ್ರವೇಶಕ್ಕಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ' ಎಂದು ಅವರು ಹೇಳಿದರು.
ಟಾಸ್ ಗೆದ್ದ ಸಿಎಸ್‌ಕೆ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಜಿಟಿಯ ಸಾಯಿ ಸುದರ್ಶನ್ (51 ಎಸೆತಗಳಲ್ಲಿ 103, ಐದು ಬೌಂಡರಿ ಮತ್ತು 7 ಸಿಕ್ಸರ್‌ಗಳು) ಮತ್ತು ನಾಯಕ ಶುಭಮನ್ ಗಿಲ್ (55 ಎಸೆತಗಳಲ್ಲಿ 9 ಬೌಂಡರಿ ಮತ್ತು ಆರು ಸಿಕ್ಸರ್‌ಗಳೊಂದಿಗೆ 104) 210 ರನ್‌ಗಳ ಆರಂಭಿಕ ಜೊತೆಯಾಟವಾಡಿದರು. ಇದು ಜಿಟಿ ನಿಗದಿತ 20 ಓವರ್‌ಗಳಲ್ಲಿ 231 ರನ್ ಗಳಿಸಲು ನೆರವಾಯಿತು. ಈ ವೇಳೆ ಜಿಟಿ 3 ವಿಕೆಟ್ ಕಳೆದುಕೊಂಡಿತ್ತು.
ಜಿಟಿ ನೀಡಿದ ಬೃಹತ್ ಮೊತ್ತವನ್ನು ಬೆನ್ನತ್ತಿದ ಸಿಎಸ್‌ಕೆಯ ಡ್ಯಾರಿಲ್ ಮಿಚೆಲ್ (34 ಎಸೆತಗಳಲ್ಲಿ 63, ಏಳು ಬೌಂಡರಿ ಮತ್ತು ಮೂರು ಸಿಕ್ಸರ್) ಮತ್ತು ಮೊಯಿನ್ ಅಲಿ (36 ಎಸೆತಗಳಲ್ಲಿ 4 ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳೊಂದಿಗೆ 56) ಗಳಿಸುವ ಮೂಲಕ ತಂಡಕ್ಕೆ ನೆರವಾದರು. ಆದರೆ, ನಂತರ ಸಿಎಸ್‌ಕೆ ನಿಯಮಿತವಾಗಿ ವಿಕೆಟ್‌ಗಳನ್ನು ಕಳೆದುಕೊಂಡಿತು ಮತ್ತು 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 196 ರನ್ ಗಳಿಸಲಷ್ಟೇ ಸೀಮಿತವಾಯಿತು.