ನವದೆಹಲಿ: ಬಾಂಗ್ಲಾದೇಶ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಭಾರತ ತಂಡ ಬಾಂಗ್ಲಾದೇಶಕ್ಕೆ ಗೆಲ್ಲಲು 222 ರನ್ ಬೃಹತ್ ಗುರಿ ನೀಡಿದೆ.
ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ 2ನೇ ಟಿ20 ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ತಂಡ ನಿಗಧಿತ 20 ಓವರ್ ನಲ್ಲಿ ನಿತೀಶ್ ರೆಡ್ಡಿ (74 ರನ್) ಮತ್ತು ರಿಂಕು ಸಿಂಗ್ (53 ರನ್) ಸ್ಫೋಟಕ ಅರ್ಧಶತಕಗಳ ನೆರವಿನಿಂದ 221ರನ್ ಬೃಹತ್ ಮೊತ್ತ ಪೇರಿಸಿದೆ.
ಆರಂಭಿಕ ಆಘಾತದ ಹೊರತಾಗಿಯೂ ಭಾರತ ತಂಡ ನಿತೀಶ್ ರೆಡ್ಡಿ ಮತ್ತು ರಿಂಕು ಸಿಂಗ್ ರ ಅಮೋಘ ಬ್ಯಾಟಿಂಗ್ ನೆರವಿನಿಂದ ನಿಗಧಿತ 20 ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 221ರನ್ ಪೇರಿಸಿ ಬಾಂಗ್ಲಾದೇಶಕ್ಕೆ ಗೆಲ್ಲಲು 222ರನ್ ಗಳ ಬೃಹತ್ ಗುರಿ ನೀಡಿದೆ. ಅಂತಿಮ ಓವರ್ ನ ಮೊದಲ ಎಸೆತದಲ್ಲೇ ಹಾರ್ದಿಕ್ ಪಾಂಡ್ಯ (32 ರನ್) ಔಟಾಗಿದ್ದರಿಂದ ಭಾರತ ಮತ್ತಷ್ಟು ರನ್ ಗಳಿಸುವ ಅವಕಾಶ ಕೈ ತಪ್ಪಿತು.
ಅಂತಿಮ ಓವರ್ ನಲ್ಲಿ ಭಾರತ 3 ವಿಕೆಟ್ ಗಳನ್ನು ಕಳೆದುಕೊಂಡು ಕೇವಲ 8ರನ್ ಮಾತ್ರ ಕಲೆಹಾಕಿತು. ಬಾಂಗ್ಲಾದೇಶ ಪರ ರಿಶಾದ್ ಹೊಸೇನ್ 3 ವಿಕೆಟ್ ಕಬಳಿಸಿದರೆ, ಟಸ್ಕಿನ್ ಅಹ್ಮದ್, ತಾಂಜಿಮ್ ಹಸನ್ ಸಕೀಬ್ ಮತ್ತು ಮುಸ್ತಫಿಜುರ್ ರೆಹ್ಮಾನ್ ತಲಾ 2 ವಿಕೆಟ್ ಪಡೆದರು.