ದುಬೈ: ಐಸಿಸಿ ಮಹಿಳಾ ಟಿ20 ವಿಶ್ವಕಪ್ ನಲ್ಲಿ ಭಾರತ ವನಿತೆಯರ ತಂಡ ಕೂಡ ಶ್ರೀಲಂಕಾ ವಿರುದ್ಧ ಭರ್ಜರಿ ಜಯ ದಾಖಲಿಸಿದ್ದು, 82ರನ್ ಗಳ ಅಂತರದಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿದೆ.
ಇಂದು ದುಬೈ ಇಂಟರ್ ನ್ಯಾಷನಲ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ ನೀಡಿದ್ದ 173 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತುವಲ್ಲಿ ಶ್ರೀಲಂಕಾ ಮಹಿಳಾ ತಂಡ ವಿಫಲವಾಯಿತು. 19.5 ಓವರ್ ನಲ್ಲಿ ಶ್ರೀಲಂಕಾ ತಂಡ ಕೇವಲ 90 ರನ್ ಗಳಿಗೇ ಆಲೌಟ್ ಆಗುವ ಮೂಲಕ 82 ರನ್ ಅಂತರದ ಹೀನಾಯ ಸೋಲು ದಾಖಲಿಸಿತು.
ಶ್ರೀಲಂಕಾ ಪರ ಕವೀಶಾ ದಿಲ್ಹರಿ (21), ಅನುಷ್ಕಾ ಸಂಜೀವನಿ (20) ಮತ್ತು ಅಮಾ ಕಂಚನಾ (19)ಮಾತ್ರ ಎರಡಂಕಿ ಮೊತ್ತ ಗಳಿಸಿದರು. ಅಂತಿಮವಾಗಿ ಶ್ರೀಲಂಕಾ ತಂಡ 19.5 ಓವರ್ ನಲ್ಲಿ 90ರನ್ ಗಳಿಸಿ ಆಲೌಟ್ ಆಯಿತು. ಅಂತೆಯೇ 82 ರನ್ ಅಂತರದ ಹೀನಾಯ ಸೋಲು ದಾಖಲಿಸಿತು.
ಭಾರತದ ಪರ ಅರುಂಧತಿ ರೆಡ್ಡಿ ಮತ್ತು ಆಶಾ ಶೋಭಾನ ತಲಾ 3 ವಿಕೆಟ್ ಕಬಳಿಸಿದರೆ, ರೇಣುಕಾ ಸಿಂಗ್ 2 ಮತ್ತು ಕನ್ನಡತಿ ಶ್ರೇಯಾಂಕ ಪಾಟಿಲ್ ಮತ್ತು ದೀಪ್ತಿ ಶರ್ಮಾ ತಲಾ 1 ವಿಕೆಟ್ ಪಡೆದರು.
ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ ನಿಗಧಿತ 20 ಓವರ್ ನಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 172 ರನ್ ಗಳ ಬೃಹತ್ ಮೊತ್ತ ಕಲೆ ಹಾಕಿತ್ತು. ಭಾರತದ ಪರ ಸ್ಮೃತಿ ಮಂದಾನ (50 ರನ್), ನಾಯಕಿ ಹರ್ಮನ್ ಪ್ರೀತ್ ಕೌರ್ (ಅಜೇಯ 52) ಅರ್ಧಶತಕ ಸಿಡಿಸಿ ಭಾರತದ ಬೃಹತ್ ಮೊತ್ತಕ್ಕೆ ನೆರವಾದರು. ಉಳಿದಂತೆ ಶಫಾಲಿ ವರ್ಮಾ (43 ರನ್), ಜೆಮೀಮಾ ರೋಡ್ರಿಗಸ್ (16) ಮತ್ತು ರಿಚಾಘೋಷ್ ಅಜೇಯ 6 ಗಳಿಸಿದರು.
ಭಾರತಕ್ಕೆ ದಾಖಲೆಯ ಜಯ
ಇನ್ನು ಈ ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ದಾಖಲಿಸಿದ 82ರನ್ ಗಳ ಜಯ ಟಿ20 ವಿಶ್ವಕಪ್ ಇತಿಹಾಸದಲ್ಲೇ ಭಾರತ ಮಹಿಳಾ ತಂಡ (ರನ್ ಲೆಕ್ಕಾಚಾರದಲ್ಲಿ) ಗಳಿಸಿದ ಬಹುದೊಡ್ಡ ಜಯವಾಗಿದೆ.
ಟೂರ್ನಿಯಿಂದ ಶ್ರೀಲಂಕಾ ಔಟ್
ಅಂತೆಯೇ ಈ ಪಂದ್ಯದ ಸೋಲಿನೊಂದಿಗೆ ಶ್ರೀಲಂಕಾ ತಂಡ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದೆ. ತಾನಾಡಿದ 3 ಪಂದ್ಯಗಳ ಪೈಕಿ ಮೂರರಲ್ಲೂ ಶ್ರೀಲಂಕಾ ತಂಡ ಸೋತು ಟೂರ್ನಿಯಿಂದ ಹೊರಬಿದ್ದಿದೆ.
2ನೇ ಸ್ಥಾನಕ್ಕೇರಿದ ಭಾರತ
ಇನ್ನು ಈ ಬೃಹತ್ ಜಯದ ಮೂಲಕ ಭಾರತ ತಂಡ ತನ್ನ ಅಂಕಗಳಿಕೆಯನ್ನು 4ಕ್ಕೆ ಏರಿಸಿಕೊಂಡಿದ್ದು, +0.576 ನೆಟ್ ರನ್ ರೇಟ್ ನೊಂದಿಗೆ 2ನೇ ಸ್ಥಾನಕ್ಕೇರಿದೆ. 2ನೇ ಸ್ಥಾನದಲ್ಲಿದ್ದ ಪಾಕಿಸ್ತಾನ 3ನೇ ಸ್ಥಾನಕ್ಕೆ ಕುಸಿದಿದೆ.