ಬೆಂಗಳೂರು: ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 402 ರನ್ ಗಳಿಗೆ ಕಟ್ಟಿಹಾಕಿರುವ ಭರತ ತಂಡ 2ನೇ ಇನ್ನಿಂಗ್ಸ್ ನಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಮಾಡುತ್ತಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ 3ನೇ ದಿನದಾಟದಲ್ಲಿ ಕೊನೆಗೂ ನ್ಯೂಜಿಲೆಂಡ್ ತಂಡವನ್ನು ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 402ರನ್ ಗಳಿಗೆ ಕಟ್ಟಿಹಾಕಿದೆ.
ಕಿವೀಸ್ ಪರ ಡೆವಾನ್ ಕಾನ್ವೆ 91 ರನ್ ಗಳಿಸಿದರೆ, ರಚಿನ್ ರವೀಂದ್ರ ಶತಕ ಸಿಡಿಸಿದರು. ಅಂತೆಯೇ ಕೆಳ ಕ್ರಮಾಂಕದಲ್ಲಿ ಟಿಮ್ ಸೌಥಿ 65 ರನ್ ಗಳಿಸಿ ಕಿವೀಸ್ ಮೊತ್ತ 400ರ ಗಡಿ ದಾಟುವಂತೆ ನೋಡಿಕೊಂಡರು. ಆ ಮೂಲಕ ಭಾರತದ ವಿರುದ್ಧ 356ರನ್ ಗಳ ಮುನ್ನಡೆ ಸಾಧಿಸಿದರು.
ಇನ್ನು ಭಾರತದ ಪರ ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ತಲಾ 3 ವಿಕೆಟ್ ಪಡೆದರೆ, ಮಹಮದ್ ಸಿರಾಜ್ 2, ಆರ್ ಅಶ್ವಿನ್ ಮತ್ತು ಜಸ್ ಪ್ರೀತ್ ಬುಮ್ರಾ ತಲಾ 1 ವಿಕೆಟ್ ಪಡೆದರು.
2ನೇ ಇನ್ನಿಂಗ್ಸ್ ನಲ್ಲಿ ಭಾರತದ ಎಚ್ಚರಿಕೆಯ ಬ್ಯಾಟಿಂಗ್
ಇನ್ನು ಮೊದಲ ಇನ್ನಿಂಗ್ಸ್ ನಲ್ಲಿ ಕಳಪೆ ಬ್ಯಾಟಿಂಗ್ ಮೂಲಕ 46 ರನ್ ಗೇ ಆಲೌಟ್ ಆಗಿದ್ದ ಭಾರತ ತಂಡ 2ನೇ ಇನ್ನಿಂಗ್ಸ್ ನಲ್ಲಿ ಎಚ್ಚರಿಕೆ ಬ್ಯಾಟಿಂಗ್ ಮಾಡುತ್ತಿದೆ. ಭಾರತ ತಂಡ ಬರೊಬ್ಬರಿ 356ರನ್ ಗಳ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ್ದು, ಭಾರತದ ನಾಯಕ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಜೋಡಿ ಕಣಕ್ಕಿಳಿದಿದೆ.
ಇತ್ತೀಚಿನ ವರದಿ ಬಂದಾಗ ಭಾರತ 1 ವಿಕೆಟ್ ನಷ್ಟಕ್ಕೆ 72 ರನ್ ಕಲೆಹಾಕಿದ್ದು, 35 ರನ್ ಗಳಿಸಿದ್ದ ಜೈಸ್ವಾಲ್ ಎಜಾಜ್ ಪಟೇಲ್ ಬೌಲಿಂಗ್ ನಲ್ಲಿ ಸ್ಟಂಪೌಟ್ ಆಗಿದ್ದಾರೆ. 36 ರನ್ಈ ಗಳಿಸಿರುವ ರೋಹಿತ್ ಶರ್ಮಾ ಅವರನ್ನು ಈಗಷ್ಟೇ ಕ್ರೀಸ್ ಗೆ ಬಂದ ವಿರಾಟ್ ಕೊಹ್ಲಿ ಸೇರಿಕೊಂಡಿದ್ದಾರೆ.
ಭಾರತ ಇನ್ನೂ 284 ರನ್ ಗಳ ಹಿನ್ನಡೆಯಲ್ಲಿದೆ.