ಲಾಹೋರ್: ಐಸಿಸಿ ಚಾಂಪಿಯನ್ಸ್ ಟ್ರೋಫಿ ಸೋಲು ಬಳಿಕ ನ್ಯೂಜಿಲೆಂಡ್ ವಿರುದ್ಧದ ಟಿ20 ಮತ್ತು ಏಕದಿನ ಸರಣಿ ಸೋಲಿನ ಹತಾಶೆಯಲ್ಲಿರುವ ಪಾಕಿಸ್ತಾನ ಕ್ರಿಕೆಟ್ ಗೆ ಮತ್ತೊಂದು ಆಘಾತ ಎದುರಾಗಿದ್ದು, ಪಾಕ್ ಕ್ರಿಕೆಟ್ ಮಂಡಳಿ ವಿರುದ್ಧವೇ ಪಾಕಿಸ್ತಾನದ ಹಿರಿಯ ಆಟಗಾರರು ತಿರುಗಿಬಿದ್ದಿದ್ದಾರೆ ಎಂದು ಹೇಳಲಾಗಿದೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಯೋಜನೆ ಮಾಡಿ ಜಾಗತಿಕ ಮಟ್ಟದಲ್ಲಿ ತೀವ್ರ ಮುಖಭಂಗಕ್ಕೀಡಾಗಿದ್ದ ಪಾಕಿಸ್ತಾನಕ್ಕೆ ಇದೀಗ ಮತ್ತೊಂದು ಮುಜುಗರ ಎದುರಾಗಿದ್ದು ಈ ಬಾರಿ ಪಿಸಿಬಿ ವಿರುದ್ಧವೇ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರು ತಿರುಗಿ ಬಿದ್ದಿದ್ದಾರೆ.
ಪ್ರಮುಖವಾಗಿ ಮಾಜಿ ನಾಯಕರಾದ ಮಹಮದ್ ರಿಜ್ವಾನ್ ಮತ್ತು ತಂಡದ ಸ್ಟಾರ್ ಆಟಗಾರ ಬಾಬರ್ ಆಜಂ ಪಿಸಿಬಿ ವಿರುದ್ಧ ಕಿಡಿಕಾರಿದ್ದು, ನಮಗೆ ಹೆಚ್ಚುವರಿ ಅಧಿಕಾರ ಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ ಈ ಸಂಬಂಧ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ.
ನ್ಯೂಜಿಲೆಂಡ್ ಪ್ರವಾಸದಲ್ಲಿ ಪಾಕಿಸ್ತಾನ ತಂಡ ಟಿ20 ಸರಣಿ ಸೋಲು ಬೆನ್ನಲ್ಲೇ ಏಕದಿನ ಸರಣಿಯಲ್ಲೂ ವೈಟ್ ವಾಶ್ ಸರಣಿ ಸೋಲು ಕಂಡಿತ್ತು. ಈ ಸೋಲಿನ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ತಂಡಜ ವಿರುದ್ದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಪ್ರಮುಖವಾಗಿ ತಂಡದ ಸ್ಟಾರ್ ಆಟಗಾರರ ವಿರುದ್ಧ ಅಭಿಮಾನಿಗಳು ಮತ್ತು ಮಾಜಿ ಆಟಗಾರರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ನ್ಯೂಜಿಲೆಂಡ್ ಎ ಆಟಗಾರರ ವಿರುದ್ಧವೇ ಹೀನಾಯ ಪ್ರದರ್ಶನ
ಇನ್ನು ಐಪಿಎಲ್ ಹಿನ್ನಲೆಯಲ್ಲಿ ನ್ಯೂಜಿಲೆಂಡ್ ತಂಡದ ಪ್ರಮುಖ ಆಟಗಾರರು ಭಾರತದಲ್ಲಿ ಚಟುಕು ಕ್ರಿಕೆಟ್ ಟೂರ್ನಿಯಲ್ಲಿ ಬಿಸಿಯಾಗಿದ್ದಾರೆ. ನ್ಯೂಜಿಲೆಂಡ್ ಸ್ಟಾರ್ ಆಟಗಾರರಾದ ಕೇನ್ ವಿಲಿಯಮ್ಸನ್, ಮಿಚೆಲ್ ಸ್ಯಾಂಟ್ನರ್, ರಚಿನ್ ರವೀಂದ್ರ, ಡೆವೊನ್ ಕಾನ್ವೆ, ಕೈಲ್ ಜೇಮಿಸನ್, ಟಾಮ್ ಲ್ಯಾಥಮ್, ವಿಲ್ ಯಂಗ್, ಇಶ್ ಸೋಧಿ, ಲಾಕಿ ಫರ್ಗುಸನ್, ಗ್ಲೆನ್ ಫಿಲಿಪ್ಸ್ ಮತ್ತು ಮ್ಯಾಟ್ ಹೆನ್ರಿ ಐಪಿಎಲ್ ನಲ್ಲಿ ವಿವಿಧ ತಂಡಗಳಲ್ಲಿ ಆಡುತ್ತಿದ್ದಾರೆ. ಹೀಗಾಗಿ ಪಾಕಿಸ್ತಾನ ವಿರುದ್ಧ ನ್ಯೂಜಿಲೆಂಡ್ ನ ಯುವ ಆಟಗಾರರು ಭಾಗಿಯಾಗಿದ್ದು, ಈ ಅನನುಭವಿ ಆಟಗಾರರ ವಿರುದ್ಧವೂ ಪಾಕಿಸ್ತಾನ ಅನುಭವಿ ತಂಡ ಸೋತು ಸುಣ್ಣವಾಗಿದೆ. ಮೊದಲು 5 ಪಂದ್ಯಗಳ ಟಿ20 ಸರಣಿಯನ್ನು 4-1 ಅಂತರದಲ್ಲಿ ಸೋತಿದ್ದ ಪಾಕಿಸ್ತಾನ ಬಳಿಕ ನಡೆದ 3 ಪಂದ್ಯಗಳ ಏಕದಿನ ಸರಣಿಯನ್ನೂ 3-0 ಅಂತರದಲ್ಲಿ ಕಳೆದುಕೊಂಡಿದೆ.
'ತಂಡದ ಆಯ್ಕೆಯೇ ಸರಿ ಇಲ್ಲ.. ನಮಗೆ ಹೆಚ್ಚು ಅಧಿಕಾರ ಕೊಡಿ'
ಐಸಿಸಿ ಚಾಂಪಿಯನ್ಸ್ ಟ್ರೋಫಿ ಮತ್ತು ನ್ಯೂಜಿಲೆಂಡ್ ಪ್ರವಾಸದಲ್ಲಿನ ಕಹಿ ಅನುಭವದ ಬೆನ್ನಲ್ಲೇ ಇದೀಗ ಪಾಕಿಸ್ತಾನದ ಹಿರಿಯ ಆಟಗಾರರು ಪಿಸಿಬಿ ಮತ್ತು ಆಯ್ಕೆ ಸಮಿತಿ ವಿರುದ್ಧ ಕಿಡಿಕಾರುತ್ತಿದ್ದಾರೆ. ತಂಡದ ಇಂದಿನ ಹೀನಾಯ ಪರಿಸ್ಥಿತಿಗೆ ಪಿಸಿಬಿ ಮತ್ತು ಆಯ್ಕೆ ಸಮಿತಿ ಕಾರಣ. ನಮಗೆ ಸೂಕ್ತ ತಂಡವನ್ನು ಕಲ್ಪಿಸುತ್ತಿಲ್ಲ. ತಂಡದ ಆಯ್ಕೆ ಪ್ರಕ್ರಿಯೆಲ್ಲಿ ನಮಗೂ ಅಧಿಕಾರ ಬೇಕು ಎಂದು ಪಾಕಿಸ್ತಾನದ ನಾಯಕ ಮಹಮದ್ ರಿಜ್ವಾನ್ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಂತೆಯೇ ಮಹಮದ್ ರಿಜ್ವಾನ್ ಮತ್ತು ಬಾಬರ್ ಆಜಂ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರನ್ನು ಭೇಟಿಯಾಗಲು ನಿರ್ಧರಿಸಿದ್ದು, ಇದೇ ವಾರ ಈ ಮಹತ್ವದ ಸಭೆ ನಡೆಯಲಿದೆ ಎಂದು ಹೇಳಲಾಗಿದೆ.
ಟಿ20 ಸರಣಿಯಿಂದ ಕೈಬಿಟ್ಟಿದ್ದಕ್ಕೆ ಆಕ್ರೋಶ
ನ್ಯೂಜಿಲೆಂಡ್‌ನಲ್ಲಿ ನಡೆದ ಐದು ಪಂದ್ಯಗಳ ಟ್ವೆಂಟಿ-20 ಅಂತರರಾಷ್ಟ್ರೀಯ ಸರಣಿಗೆ ಬಾಬರ್ ಅಜಮ್ ಮತ್ತು ತನ್ನನ್ನು ಕೈಬಿಟ್ಟಿರುವ ಆಯ್ಕೆದಾರರ ನಿರ್ಧಾರದಿಂದ ರಿಜ್ವಾನ್ ಬೇಸರಗೊಂಡಿದ್ದಾರೆ. ಪಾಕಿಸ್ತಾನ ತಂಡದ ಆಡಳಿತ ಮಂಡಳಿ ಮತ್ತು ಆಯ್ಕೆ ಸಮಿತಿಯು ಹೊಸ ನಾಯಕ ಸಲ್ಮಾನ್ ಆಘಾ ಅವರ ಅಡಿಯಲ್ಲಿ ಕೆಲವು ಯುವ ಆಟಗಾರರನ್ನು ಪ್ರಯತ್ನಿಸಲು ತಮ್ಮನ್ನು ಕೈಬಿಡಲು ನಿರ್ಧರಿಸಿದ ನಂತರ, ಇಬ್ಬರೂ ಆಟಗಾರರು ಪಿಸಿಬಿ ಮುಖ್ಯಸ್ಥರನ್ನು ಭೇಟಿ ಮಾಡಲು ಪ್ರಯತ್ನಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.