ಮುಂಬೈ: ಸೆಪ್ಟೆಂಬರ್ 9 ರಿಂದ ದುಬೈಯಲ್ಲಿ ಆರಂಭವಾಗಲಿರುವ ಏಷ್ಯ ಕಪ್ 2025 ಟೂರ್ನಿಗಾಗಿ ಭಾರತೀಯ ತಂಡವನ್ನು ಪ್ರಕಟಿಸಲಾಗಿದೆ. ಆದರೆ ಸೆಪ್ಟೆಂಬರ್ 14 ರಂದು ನಿಗದಿಯಾಗಿರುವ ಭಾರತ- ಪಾಕಿಸ್ತಾನ ನಡುವಣ ಹೈವೋಲ್ಜೇಜ್ ಪಂದ್ಯ ನಡೆಯುವುದೇ ಎಂಬ ಅನುಮಾನ ಇದೆ. ಈ ಕುರಿತು ಸಾಕಷ್ಟು ಚರ್ಚೆಯೂ ನಡೆಯುತ್ತಿದೆ.
ಈ ಮಧ್ಯೆ ಮಂಗಳವಾರ ತಂಡ ಆಯ್ಕೆ ಮಾಡಿದ ನಂತರ ಸುದ್ದಿಗೋಷ್ಠಿಯಲ್ಲಿ ಭಾರತ-ಪಾಕಿಸ್ತಾನದ ನಡುವೆ ಪಂದ್ಯ ನಡೆಯುವುದೇ? ಎಂಬ ಪತ್ರಕರ್ತರ ಪ್ರಶ್ನೆಗೆ ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಉತ್ತರಿಸಲು ಮುಂದಾದಾಗ, ಈ ಪ್ರಶ್ನೆಗೆ ಉತ್ತರಿಸದಂತೆ ಅಜಿತ್ ಅಗರ್ಕರ್ ಅವರನ್ನು ಬಿಸಿಸಿಐ ಪ್ರತಿನಿಧಿಯೊಬ್ಬರು ತಡೆದ ಘಟನೆ ನಡೆದಿದೆ.
'ಈ ಬಾರಿಯ ಏಷ್ಯಾಕಪ್ ವೇಳಾಪಟ್ಟಿ ನೋಡಿದ್ರೆ ಸೆಪ್ಟೆಂಬರ್ 14 ರಂದು ಭಾರತ ಮತ್ತು ಪಾಕಿಸ್ತಾನದ ನಡುವೆ ದೊಡ್ಡ ಪಂದ್ಯವಿದೆ. ಕಳೆದ ಎರಡು ತಿಂಗಳಿನಿಂದ ಉಭಯ ದೇಶಗಳ ನಡುವೆ ನಡೆದ ಎಲ್ಲಾ ವಿದ್ಯಮಾನಗಳನ್ನು ನೋಡಿದ್ರೆ, ನೀವು ಆ ಪಂದ್ಯವನ್ನು ಹೇಗೆ ಎದುರಿಸುತ್ತೀರಿ?' ಎಂದು ವರದಿಗಾರರೊಬ್ಬರು ಕೇಳಿದರು.
ಅಗರ್ಕರ್ ಉತ್ತರಿಸಲು ಮುಂದಾಗುತ್ತಿದ್ದಂತೆಯೇ ಮಧ್ಯ ಪ್ರವೇಶಿಸಿದ ಬಿಸಿಸಿಐ ಮಾಧ್ಯಮ ವ್ಯವಸ್ಥಾಪಕರು, ತಂಡದ ಆಯ್ಕೆಗೆ ಸಂಬಂಧಿಸಿದಂತೆ ಪ್ರಶ್ನೆಯಿದ್ದರೆ, ಅದನ್ನು ಮಾತ್ರ ಕೇಳಿ ಎಂದು ಹೇಳುವ ಮೂಲಕ ಪ್ರತಿಕ್ರಿಯಿಸಿದಂತೆ ತಡೆದರು.
ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ಹಾಗೂ ಆಪರೇಷನ್ ಸಿಂಧೂರ ನಂತರ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಸಂಬಂಧಗಳನ್ನು ಕಡಿದುಕೊಳ್ಳಲು ಬಿಸಿಸಿಐಗೆ ಒತ್ತಡಗಳು ಹೆಚ್ಚಾಗಿವೆ.
ಏಷ್ಯಾಕಪ್ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯ ನಿಗದಿ ಮಾಹಿತಿ ತಿಳಿದ ನಂತರ ಸಂಸದ ಅಸಾದುದ್ದೀನ್ ಓವೈಸಿ ಸೇರಿದಂತೆ ಹಲವರು ಬಿಸಿಸಿಐ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸುತ್ತಿದ್ದಾರೆ.