ರಾಯಪುರ: ಟೀಂ ಇಂಡಿಯಾ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಹಾಗೂ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ನಡುವಿನ ವಿವಾದ ತಣ್ಣಗಾಗಿರುವುದಾಗಿ ಅನೇಕ ವರದಿಗಳು ಹೇಳಿದ್ದರೂ ಏಕದಿನ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬಂತೆ ಕಂಡುಬರುತ್ತಿದೆ.
ಗೌತಮ್ ಗಂಭೀರ್ ಹಾಗೂ ಕೊಹ್ಲಿ ನಡುವೆ ಬಿರುಕು ಮೂಡಿದೆ ಎನ್ನಲಾಗುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ವೀಡಿಯೊಗಳು ಈ ಊಹಾಪೋಹಗಳಿಗೆ ಪುಷ್ಠಿ ನೀಡುತ್ತಿವೆ.
ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಸರಣಿಯ ಎರಡನೇ ಏಕದಿನ ಪಂದ್ಯಕ್ಕೆ ರಾಯಪುರದಲ್ಲಿ ಭಾರತ ತಂಡ ಸಿದ್ಧತೆ ನಡೆಸುತ್ತಿರುವಂತೆಯೇ ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿಗೆ ಇತ್ತೀಚಿನ ಸೇರ್ಪಡೆಯಾದ ಪ್ರಗ್ಯಾನ್ ಓಜಾ ಅವರೊಂದಿಗೆ ಕೊಹ್ಲಿ ತೀವ್ರ ಮಾತುಕತೆಯಲ್ಲಿ ತೊಡಗಿರುವುದು ವಿಡಿಯೋದಲ್ಲಿದೆ.
ತಂಡದ ಸದಸ್ಯರು ವಿಮಾನ ನಿಲ್ದಾಣದಲ್ಲಿ ಕಾಯುತ್ತಿರುವಾಗ ಕೊಹ್ಲಿ ಮತ್ತು ಓಜಾ ಗಂಭೀರ ಚರ್ಚೆ ನಡೆಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಏಕದಿನ ಮಾದರಿಯ ಕ್ರಿಕೆಟ್ ನಲ್ಲಿ ಕೊಹ್ಲಿಯ ಭವಿಷ್ಯ ಮತ್ತು 2027 ರ ವಿಶ್ವಕಪ್‌ಗಾಗಿ ಭಾರತದ ಯೋಜನೆಗಳ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿರುವಂತೆಯೇ ಹಿರಿಯ ಆಯ್ಕೆದಾರರ ಜೊತೆಗಿನ ಕೊಹ್ಲಿಯ ಗಂಭೀರ ಚರ್ಚೆ ಮತ್ತಷ್ಟು ಕುತೂಹಲವನ್ನು ಹೆಚ್ಚಿಸಿದೆ.
ಮತ್ತೊಂದೆಡೆ ಓಜಾ ಗಂಭೀರ್ ಜೊತೆ ಕುಳಿತು ರೋಹಿತ್ ಶರ್ಮಾ ಜೊತೆ ಮಾತನಾಡುತ್ತಿರುವುದು ಕಂಡುಬಂದಿದೆ. ಆದಾಗ್ಯೂ ಕೊಹ್ಲಿ ಈ ಚರ್ಚೆಯಲ್ಲಿ ಪಾಲ್ಗೊಂಡಿಲ್ಲ.
ಕೊಹ್ಲಿ-ರೋಹಿತ್-ಗಂಭೀರ್ ವಿವಾದವೇನು?
ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಭವಿಷ್ಯದ ವದಂತಿ ಹಾಗೂ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರೊಂದಿಗಿನ ಸಂಬಂಧ ಸುತ್ತ ಸಾಕಷ್ಟು ಚರ್ಚೆ ನಡೆಯುತ್ತಿದೆ. ಡ್ರೆಸ್ಸಿಂಗ್ ರೂಮ್ ನಲ್ಲಿ ಹಿರಿಯ ಆಟಗಾರರು ಹಾಗೂ ಗೌತಮ್ ಗಂಭೀರ್ ನಡುವೆ ಹೊಂದಾಣಿಕೆ ಇಲ್ಲ ಎಂಬಂತಹ ಮಾತುಗಳು ಕೇಳಿಬರುತ್ತಿವೆ.