ಐಪಿಎಲ್ 2026 ಕ್ಕೂ ಮುನ್ನ ಐಪಿಎಲ್ ಫ್ರಾಂಚೈಸಿಯಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಖರೀದಿಸಲು ಆಧಾರ್ ಪೂನಾವಾಲಾ ಮತ್ತು ಹೊಂಬಾಳೆ ಫಿಲ್ಮ್ಸ್ ಬಳಿಕ ಮತ್ತೊಂದು ಸಂಸ್ಥೆ ಆಸಕ್ತಿ ತೋರಿಸಿದೆ. ಸದ್ಯ ಡಯಾಜಿಯೊ (Diageo) ಒಡೆತನದ ಈ ಫ್ರಾಂಚೈಸಿ ಮಾರಾಟಕ್ಕೆ ಸಿದ್ಧವಾಗಿದ್ದು, ಈ ಪ್ರಕ್ರಿಯೆಯು 2026ರ ಮಾರ್ಚ್ 31 ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈಗ, ದಿ ಹಂಡ್ರೆಡ್ ಫ್ರಾಂಚೈಸಿಯಾದ ವೆಲ್ಶ್ ಫೈರ್ ಆರ್‌ಸಿಬಿಯನ್ನು ಸ್ವಾಧೀನಪಡಿಸಿಕೊಳ್ಳಲು ಆಸಕ್ತಿ ತೋರಿಸಿದೆ ಎಂದು ಬೆಳಕಿಗೆ ಬಂದಿದೆ.
ದಿ ಟೆಲಿಗ್ರಾಫ್ ಯುಕೆ ಪ್ರಕಾರ, ಗ್ಲಾಮೋರ್ಗನ್ ಕ್ರಿಕೆಟ್ ಕ್ಲಬ್ ಮತ್ತು ಅಮೆರಿಕನ್ ಟೆಕ್ ಬಿಲಿಯನೇರ್ ಸಂಜಯ್ ಗೋವಿಲ್ ಒಡೆತನದ ಕ್ರಿಕೆಟ್ ತಂಡವಾದ ವೆಲ್ಷ್ ಫೈರ್, ಬಿಗ್ ಬ್ಯಾಷ್ ಲೀಗ್ (ಬಿಬಿಎಲ್) ನಲ್ಲಿ ಮುಂಬರುವ ತಂಡಗಳ ಮಾರಾಟದ ಮೇಲೆ ತೀವ್ರ ನಿಗಾ ಇಟ್ಟಿದ್ದು, ಆರ್‌ಸಿಬಿ ಫ್ರಾಂಚೈಸಿಯನ್ನು ಖರೀದಿಸಲು ಸಹ ಸಹ ಆಸಕ್ತಿ ಹೊಂದಿದೆ. ಐಪಿಎಲ್ ತಂಡವನ್ನು ಖರೀದಿಸಲು ತಮ್ಮ ಬಳಿ ಸಾಕಷ್ಟು ಹಣವನ್ನು ಹೊಂದಿದೆ ಎಂದು ವರದಿಯಾಗಿದೆ. ಈ ಹಿಂದೆ, ಆರ್‌ಸಿಬಿಯನ್ನು $2 ಬಿಲಿಯನ್‌ಗೆ ಮಾರಾಟ ಮಾಡಬಹುದು ಎಂದು ವರದಿಗಳು ತಿಳಿಸಿವೆ.
'ಫೈರ್ ಮತ್ತು ಫ್ರೀಡಂ ನಿರ್ದಿಷ್ಟ ಪ್ರಕರಣಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಆದಾಗ್ಯೂ, ನಾವು ಜಾಗತಿಕ ಕ್ರಿಕೆಟ್ ಫ್ರಾಂಚೈಸಿಗಳನ್ನು ಖರೀದಿಸುವ, ನಿರ್ವಹಿಸುವ ಮತ್ತು ಅಭಿವೃದ್ಧಿಪಡಿಸುವ ವ್ಯವಹಾರದಲ್ಲಿದ್ದೇವೆ. ಜಾಗತಿಕ ಕ್ರಿಕೆಟ್ ಸ್ವತ್ತುಗಳಲ್ಲಿ ಏಕೀಕರಣದ ಕಡೆಗೆ ಪ್ರಸ್ತುತ ರಚನಾತ್ಮಕ ಪ್ರವೃತ್ತಿಗಳನ್ನು ನಾವು ಗಮನಿಸುತ್ತೇವೆ ಮತ್ತು ನಮ್ಮ ಷೇರುದಾರರಿಗೆ ಮೌಲ್ಯವನ್ನು ಸೃಷ್ಟಿಸುವಾಗ ಆ ಪ್ರಕ್ರಿಯೆಯಲ್ಲಿ ಸಂಪೂರ್ಣವಾಗಿ ಭಾಗವಹಿಸಲು ಉದ್ದೇಶಿಸಿದ್ದೇವೆ' ಎಂದು ಗ್ಲಾಮೋರ್ಗನ್ ಅಧ್ಯಕ್ಷ ಮಾರ್ಕ್ ರೈಡರ್ಚ್-ರಾಬರ್ಟ್ಸ್ ಪ್ರಕಟಣೆಗೆ ತಿಳಿಸಿದ್ದಾರೆ.
ಈ ಹಿಂದೆ, ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಮಾಲೀಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಧಾರ್ ಪೂನವಾಲಾ ಮತ್ತು ಬ್ರೋಕರೇಜ್ ಪ್ಲಾಟ್‌ಫಾರ್ಮ್ ಜೆರೋಧಾದ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಮತ್ತು ಮಣಿಪಾಲ್ ಶಿಕ್ಷಣ ಮತ್ತು ವೈದ್ಯಕೀಯ ಗುಂಪಿನ (ಎಂಇಎಂಜಿ) ಅಧ್ಯಕ್ಷ ರಂಜನ್ ಪೈ ಅವರು ಆರ್‌ಸಿಬಿಯನ್ನು ಖರೀದಿಸಲು ಎದುರು ನೋಡುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.
ಜಾಗತಿಕವಾಗಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಐಪಿಎಲ್ ಫ್ರಾಂಚೈಸಿಯನ್ನು 2 ಬಿಲಿಯನ್ ಡಾಲರ್ (ಸುಮಾರು 17,775 ಕೋಟಿ ರೂ.) ಗೆ ಮಾರಾಟ ಮಾಡಲು ಡಿಯಾಜಿಯೊ ಯೋಜಿಸುತ್ತಿದೆ ಎಂದು ವರದಿಯಾಗಿದೆ.