ಮೆಲ್ಬೋರ್ನ್: ಪ್ರತಿಷ್ಟಿತ ಆ್ಯಶಸ್ ಟೆಸ್ಟ್ ಕ್ರಿಕೆಟ್ ಸರಣಿಯ 4ನೇ ಪಂದ್ಯದಲ್ಲಿ ಕೊನೆಗೂ ಇಂಗ್ಲೆಂಡ್ ತಂಡ ತನ್ನ ಗೆಲುವಿನ ಖಾತೆ ತೆರೆದಿದ್ದು, ಪ್ರಬಲ ಆಸ್ಟ್ರೇಲಿಯಾ ವಿರುದ್ಧ 4 ವಿಕೆಟ್ ಅಂತರದ ಭರ್ಜರಿ ಜಯ ಸಾಧಿಸಿದೆ.
ಬೌಲರ್ ಗಳ ಆರ್ಭಟದಿಂದಾಗಿ ಕೇವಲ 2 ದಿನಗಳಲ್ಲೇ ಮುಕ್ತಾಯವಾದ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಇಂಗ್ಲೆಂಡ್ 4 ವಿಕೆಟ್ ಅಂತರದಲ್ಲಿ ಮಣಿಸಿದೆ.
ಆ್ಯಶಸ್ ಸರಣಿಯ ಮೊದಲು ಮೂರು ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿದ್ದ ಇಂಗ್ಲೆಂಡ್ ತಂಡ ಈಗಾಗಲೇ ಸರಣಿ ಕೈ ಚೆಲ್ಲಿದ್ದು, ಇದೀಗ 4ನೇ ಟೆಸ್ಟ್ ಪಂದ್ಯ ಗೆದ್ದು ಸೋಲಿನ ಅಂತರ ಕಡಿಮೆ ಮಾಡಿಕೊಂಡಿದೆ.
2ನೇ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ನೀಡಿದ್ದ 175 ರನ್ ಗಳ ಸಾಧಾರಣ ಗುರಿಯನ್ನು ಬೆನ್ನು ಹತ್ತಿದ ಇಂಗ್ಲೆಂಡ್ ತಂಡ 6 ವಿಕೆಟ್ ಕಳೆದುಕೊಂಡು 178 ರನ್ ಗಳಿಸಿ ಭರ್ಜರಿ ಗೆಲುವು ಸಾಧಿಸಿತು.
ಆ ಮೂಲಕ ಆಸಿಸ್ ನೆಲದಲ್ಲಿ ತಾನು ಕಳೆದ 15 ವರ್ಷಗಳಿಂದ ಎದುರಿಸುತ್ತಿದ್ದ ಗೆಲುವಿನ ಬರವನ್ನು ಇಂಗ್ಲೆಂಡ್ ನೀಗಿಸಿಕೊಂಡಿತು.
15 ವರ್ಷಗಳ ಬಳಿಕ ಆಸಿಸ್ ನೆಲದಲ್ಲಿ ಇಂಗ್ಲೆಂಡ್ ಗೆ ಐತಿಹಾಸಿಕ ಜಯ
ಇನ್ನು ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಪಂದ್ಯ ಗೆಲ್ಲುವ ಇಂಗ್ಲೆಂಡ್ ತಂಡದ 14 ವರ್ಷಗಳ ಕನಸು ಕೊನೆಗೂ ಈಡೇರಿದ್ದು, ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆದ ಆ್ಯಶಸ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ಭರ್ಜರಿ ಜಯ ಸಾಧಿಸಿದೆ.
ಇದಕ್ಕೂ ಮುನ್ನ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಪಂದ್ಯ ಗೆದ್ದಿದ್ದು 2011 ರಲ್ಲಿ. 2011 ರಲ್ಲಿ ನಡೆದ ಆ್ಯಶಸ್ ಸರಣಿಯ ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಆಸ್ಟ್ರೇಲಿಯಾವನ್ನು ಇನ್ನಿಂಗ್ಸ್ ಮತ್ತು 83 ರನ್‌ಗಳಿಂದ ಸೋಲಿಸಿತ್ತು. ಈ ಅಮೋಘ ಗೆಲುವಿನ ನಂತರ ಆಂಗ್ಲ ಪಡೆ ಒಮ್ಮೆಯೂ ಕಾಂಗರೂನಾಡಿನಲ್ಲಿ ಟೆಸ್ಟ್ ಪಂದ್ಯ ಗೆದ್ದಿರಲಿಲ್ಲ.
ಈ ಹದಿನಾಲ್ಕು ವರ್ಷಗಳಲ್ಲಿ ಇಂಗ್ಲೆಂಡ್ ತಂಡವು ಆಸ್ಟ್ರೇಲಿಯಾದಲ್ಲಿ 18 ಟೆಸ್ಟ್ ಪಂದ್ಯಗಳನ್ನಾಡಿದೆ. ಈ ವೇಳೆ ಇಂಗ್ಲೆಂಡ್ 16 ಮ್ಯಾಚ್ಗಳಲ್ಲಿ ಸೋಲನುಭವಿಸಿದರೆ, 2 ಪಂದ್ಯಗಳನ್ನು ಆಸ್ಟ್ರೇಲಿಯಾ ಡ್ರಾ ಮಾಡಿಕೊಂಡಿತ್ತು. ಅಂದರೆ ಕಳೆದ ಒಂದು ದಶಕದಿಂದ ಇಂಗ್ಲೆಂಡ್ ವಿರುದ್ಧ ಆಸೀಸ್ ಪಡೆ ತವರಿನಲ್ಲಿ ಒಂದೇ ಒಂದು ಪಂದ್ಯದಲ್ಲಿ ಸೋತಿರಲಿಲ್ಲ. ಇದೀಗ ಆಸ್ಟ್ರೇಲಿಯಾ ತಂಡದ ಈ ಗೆಲುವಿನ ನಾಗಲೋಟಕ್ಕೆ ಇಂಗ್ಲೆಂಡ್ ತಂಡ ಬ್ರೇಕ್ ಹಾಕಿದೆ.
2 ದಿನದಲ್ಲೇ ಪಂದ್ಯ ಮುಕ್ತಾಯ
ಈ ಪಂದ್ಯದಲ್ಲಿ ಉಭಯ ತಂಡಗಳ ಬೌಲರ್ ಗಳು ಮಿಂಚಿದ್ದು ವಿಶೇಷವಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ಕೇವಲ 152 ರನ್ ಗೆ ಆಲೌಟ್ ಆಗಿತ್ತು. ಬಳಿಕ ಬ್ಯಾಟಿಂಗ್ ನಡೆಸಿದ್ದ ಇಂಗ್ಲೆಂಡ್ ಕೂಡ 110 ರನ್ ಗೆ ಆಲೌಟ್ ಆಗಿತ್ತು.
2ನೇ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ 132 ರನ್ ಗಳಿಗೇ ಸರ್ವಪತನ ಕಂಡು ಇಂಗ್ಲೆಂಡ್ ಗೆ ಗೆಲ್ಲಲು 175 ರನ್ ಗಳ ಸಾಧಾರಣ ಗುರಿ ನೀಡಿತು. ಈ ಗುರಿಯನ್ನು ಬೆನ್ನು ಹತ್ತಿದ ಇಂಗ್ಲೆಂಡ್ ತಂಡ 6 ವಿಕೆಟ್ ಕಳೆದುಕೊಂಡು 178 ರನ್ ಗಳಿಸಿ ಭರ್ಜರಿ ಗೆಲುವು ಸಾಧಿಸಿತು.