ಡಬ್ಲ್ಯುಪಿಎಲ್ 2026ನೇ ಆವೃತ್ತಿ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಆಸ್ಟ್ರೇಲಿಯಾದ ಆಲ್‌ರೌಂಡರ್‌ಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಎಲಿಸ್ ಪೆರ್ರಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ನ (DC) ಅನ್ನಾಬೆಲ್ ಸದರ್ಲ್ಯಾಂಡ್ ಮುಂದಿನ ತಿಂಗಳು ನಡೆಯಲಿರುವ ಟೂರ್ನಿಯಿಂದ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಹಿಂದೆ ಸರಿದಿದ್ದಾರೆ.
'ಆಸ್ಟ್ರೇಲಿಯಾದ ಆಲ್‌ರೌಂಡರ್‌ಗಳಾದ ಎಲಿಸ್ ಪೆರ್ರಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು) ಮತ್ತು ಅನ್ನಾಬೆಲ್ ಸದರ್ಲ್ಯಾಂಡ್ (ದೆಹಲಿ ಕ್ಯಾಪಿಟಲ್ಸ್) ವೈಯಕ್ತಿಕ ಕಾರಣಗಳಿಂದ ಮುಂಬರುವ ಲೀಗ್‌ನಿಂದ ಹಿಂದೆ ಸರಿದಿದ್ದಾರೆ' ಎಂದು WPL ಪ್ರಕಟಣೆಯಲ್ಲಿ ತಿಳಿಸಿದೆ.
'ಪೆರ್ರಿ ಬದಲಿಗೆ ಭಾರತೀಯ ಆಲ್‌ರೌಂಡರ್ ಸಯಾಲಿ ಸತ್ಘರೆ ಆರ್‌ಸಿಬಿಗೆ ಸೇರಲಿದ್ದಾರೆ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಸದರ್ಲ್ಯಾಂಡ್‌ಗೆ ಬದಲಿಯಾಗಿ ಆಸ್ಟ್ರೇಲಿಯಾದ ಲೆಗ್-ಸ್ಪಿನ್ನರ್ ಅಲಾನಾ ಕಿಂಗ್ ಸೇರ್ಪಡೆಯಾಗಲಿದ್ದಾರೆ' ಎಂದು ಡಬ್ಲ್ಯುಪಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
ಹಿಂದಿನ ಆವೃತ್ತಿಯಲ್ಲಿ ಯುಪಿ ವಾರಿಯರ್ಸ್ (UPW) ತಂಡವನ್ನು ಪ್ರತಿನಿಧಿಸಿದ್ದ ಆಸ್ಟ್ರೇಲಿಯಾದ ಲೆಗ್-ಸ್ಪಿನ್ನರ್ ಅಲಾನಾ ಕಿಂಗ್ 27 ಟಿ20ಐಗಳಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು 27 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದೀಗ 60 ಲಕ್ಷ ರೂ. ಮೀಸಲು ಬೆಲೆಗೆ ಡಿಸಿಗೆ ಸೇರಲಿದ್ದಾರೆ' ಎಂದು ಅದು ಹೇಳಿದೆ.
ಎಡಗೈ ಸೀಮರ್ ತಾರಾ ನಾರ್ರಿಸ್ ಬದಲಿಗೆ ಆಸ್ಟ್ರೇಲಿಯಾದ ಆಲ್‌ರೌಂಡರ್ ಚಾರ್ಲಿ ನಾಟ್ ಅವರನ್ನು 10 ಲಕ್ಷ ರೂ. ಮೂಲ ಬೆಲೆಗೆ ಯುಪಿ ವಾರಿಯರ್ಸ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
2023ರಲ್ಲಿ ಡಬ್ಲ್ಯುಪಿಎಲ್‌ನ ಉದ್ಘಾಟನಾ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದ ನಾರ್ರಿಸ್, ಮುಂದಿನ ವರ್ಷ ನೇಪಾಳದಲ್ಲಿ ನಡೆಯಲಿರುವ ಮಹಿಳಾ ಟಿ20 ವಿಶ್ವಕಪ್ ಅರ್ಹತಾ ಪಂದ್ಯಕ್ಕಾಗಿ ಯುಎಸ್ಎ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
WPL ನಾಲ್ಕನೇ ಆವೃತ್ತಿಯು ಜನವರಿ 9 ರಿಂದ ಫೆಬ್ರುವರಿ 5 ರವರೆಗೆ ನವಿ ಮುಂಬೈ ಮತ್ತು ವಡೋದರಾದಲ್ಲಿ ಎರಡು ಹಂತಗಳಲ್ಲಿ ನಡೆಯಲಿದೆ.