ಲಾಹೋರ್: ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ಕ್ಕೆ ಮೈದಾನಗಳು ಸಂಪೂರ್ಣವಾಗಿ ಸಿದ್ದವಾಗಿದೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿರುವ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಬಂಡವಾಳ ಒಂದೇ ಪಂದ್ಯದಲ್ಲಿ ಬಯಲಾಗಿದ್ದು, ಪಿಸಿಪಿಯ ಕಳಪೆ ನಿರ್ವಹಣೆಯಿಂದಾಗಿ ನ್ಯೂಜಿಲೆಂಡ್ ಆಟಗಾರನ ತಲೆಗೆ ಚೆಂಡು ಬಡಿದು ಗಂಭೀರವಾಗಿ ಗಾಯಗೊಂಡಿದ್ದಾರೆ.
ಹೌದು.. ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ಕ್ಕೆ ಮೈದಾನಗಳು ಸಿದ್ದಪಡಿಸಿಕೊಂಡಿದೆ. ಐಸಿಸಿ ಸರಣಿಗೂ ಮೊದಲು ನಡೆಯುತ್ತಿರುವ ತ್ರಿಕೋನ ಏಕದಿನ ಸರಣಿಯಲ್ಲಿ ಮೈದಾನಗಳ ಸಾಮರ್ಥ್ಯ ಪರೀಕ್ಷೆ ನಡೆಯುತ್ತಿದ್ದು, ಇದೇ ವೇಳೆ ಪಾಕಿಸ್ತಾನ ಮೈದಾನಗಳ ಬಂಡವಾಳ ಬಟಾ ಬಯಲಾಗಿದೆ. ಪಾಕಿಸ್ತಾನ ವಿರುದ್ಧದ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಆಟಗಾರ ರಚಿನ್ ರವೀಂದ್ರ ತಲೆಗೆ ಚೆಂಡು ಬಡಿದು ಗಾಯಗೊಂಡಿದ್ದಾರೆ. ಕಳಪೆ ಲೈಟಿಂಗ್‌ಗೆ ಪಿಸಿಬಿ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಾಹೋರ್‌ನ ಗದ್ದಾಫಿ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ರಚಿನ್ ರವೀಂದ್ರ ತಲೆಗೆ ಚೆಂಡು ಬಡಿದು ಗಾಯಗೊಂಡಿದ್ದು, ತೀವ್ರವಾಗಿ ರಕ್ತ ಸೋರುತ್ತಲೇ ಟವಲ್ ಮುಚ್ಚಿಕೊಂಡು ಮೈದಾನದಿಂದ ಹೊರ ನಡೆದಿರುವ ವಿಡಿಯೋ ವೈರಲ್ ಆಗುತ್ತಿದೆ.
ನಿನ್ನೆ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ಬ್ಯಾಟಿಂಗ್ ವೇಳೆ 38ನೇ ಓವರ್ ನಲ್ಲಿ ಖುಶ್ದಿಲ್ ಶಾ ಭಾರಿಸಿದ ಚೆಂಡು ನೇರವಾಗಿ ರಚಿನ್ ರವೀಂದ್ರ ಅವರತ್ತ ಹೋಗಿತ್ತು. ಈ ವೇಳೆ ಮೈದಾನದ ಫ್ಲಡ್ ಲೈಟ್ ಗೊಂದಲದಿಂದಾಗಿ ಚೆಂಡು ನೇರವಾಗಿ ಅವರ ತಲೆಗೆ ಬಡಿದಿದೆ. ಚೆಂಡು ಬಡಿಯುತ್ತಿದ್ದಂತೆಯೇ ಅಲ್ಲೇ ಕುಸಿದು ಕುಳಿತ ರಚಿನ್ ರವೀಂದ್ರಗೆ ತಕ್ಷಣ ಚಿಕಿತ್ಸೆ ನೀಡಲಾಯಿತು.
ಪಿಸಿಬಿ ವಿರುದ್ದ ಆಕ್ರೋಶ
ಇನ್ನು ಇಂಟರ್ನ್ಯಾಷನಲ್ ಮಟ್ಟದಲ್ಲಿ ತಮ್ಮ ಕ್ರಿಕೆಟ್ ಮೈದಾನಗಳನ್ನು ಆಧುನೀಕರಿಸಿದ್ದೇವೆ ಎಂದು ಹೇಳಿಕೊಳ್ಳುತ್ತಿರುವ ಪಿಸಿಬಿ ಅಂತಾರಾಷ್ಟ್ರೀಯ ಪಂದ್ಯವೊಂದಕ್ಕೆ ಕಳಪೆ ಲೈಟಿಂಗ್ ವ್ಯವಸ್ಥೆ ಮಾಡಿದೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ಬೆರಳೆಣಿಕೆ ದಿನಗಳು ಬಾಕಿ ಇದ್ದರೂ ಇನ್ನೂ ಸರಿಯಾದ ಸ್ಟೇಡಿಯಂ ಸಿದ್ದತೆ ನಡೆಸದಿರುವುದಕ್ಕೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ಫೆಬ್ರವರಿ 19ರಿಂದ ಆರಂಭವಾಗಲಿದೆ.