ಕರಾಚಿ: ಭಾರತದ ವಿರುದ್ಧ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಪಂದ್ಯಕ್ಕೂ ಮುನ್ನ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಹಿನ್ನಡೆ ಉಂಟಾಗಿದೆ. ಆರಂಭಿಕ ಆಟಗಾರ ಫಖರ್ ಜಮಾನ್ ಮೊಣಕಾಲಿನ ಗಾಯದಿಂದಾಗಿ ತಂಡದಿಂದ ಹೊರಗುಳಿದಿದ್ದು, ಗುರುವಾರ ದುಬೈಗೆ ತೆರಳಿರುವ ತಂಡದಲ್ಲಿ ಇಮಾಮ್-ಉಲ್-ಹಕ್ ಸ್ಥಾನ ಪಡೆದಿದ್ದಾರೆ.
ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಕಾರ್ಯಕ್ರಮ ತಾಂತ್ರಿಕ ಸಮಿತಿಯಿಂದ ಅನುಮೋದನೆ ಪಡೆದ ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತಂಡದಲ್ಲಿ ಬದಲಾವಣೆ ಮಾಡಿದೆ.
ಭಾನುವಾರ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಟೀಂ ಇಂಡಿಯಾ ವಿರುದ್ಧ ಪಾಕಿಸ್ತಾನ ಸೆಣಸಲಿದೆ.
'72 ಏಕದಿನ ಪಂದ್ಯಗಳನ್ನು ಆಡಿರುವ ಇಪ್ಪತ್ತೊಂಬತ್ತು ವರ್ಷದ ಇಮಾಮ್ ಅವರನ್ನು ತಂಡಕ್ಕೆ ಬದಲಿ ಆಟಗಾರನಾಗಿ ಸೇರಿಸಿಕೊಳ್ಳಲಾಗಿದೆ' ಎಂದು ಐಸಿಸಿ ಮಾಧ್ಯಮ ಪ್ರಕಟಣೆ ತಿಳಿಸಿದೆ.
ಫೆಬ್ರುವರಿ 19ರಂದು ನ್ಯೂಜಿಲೆಂಡ್ ವಿರುದ್ಧದ ಚಾಂಪಿಯನ್ಸ್ ಟ್ರೋಫಿಯ ಉದ್ಘಾಟನಾ ಪಂದ್ಯದ ವೇಳೆ ಜಮಾನ್ ಗಾಯಗೊಂಡಿದ್ದರು.
'ದುರದೃಷ್ಟವಶಾತ್ ನಾನು ಈಗ ICC ಚಾಂಪಿಯನ್ಸ್ ಟ್ರೋಫಿ 2025 ರಿಂದ ಹೊರಗುಳಿದಿದ್ದೇನೆ. ಆದರೆ, ಖಂಡಿತವಾಗಿಯೂ ಅಲ್ಲಾಹ್ ಅತ್ಯುತ್ತಮ ಯೋಜಕನಾಗಿದ್ದಾನೆ. ಅವಕಾಶಕ್ಕಾಗಿ ಕೃತಜ್ಞನಾಗಿದ್ದೇನೆ. ನಾನು ಮನೆಯಿಂದಲೇ ನಮ್ಮ ಹುಡುಗರನ್ನು ಬೆಂಬಲಿಸುತ್ತೇನೆ' ಎಂದು ಜಮಾನ್ 'X' ನಲ್ಲಿ ಪೋಸ್ಟ್ ಮಾಡಿದ್ದಾರೆ.
34 ವರ್ಷದ ಜಮಾನ್, ನ್ಯೂಜಿಲೆಂಡ್ ಇನಿಂಗ್ಸ್‌ನಲ್ಲಿ ಫೀಲ್ಡಿಂಗ್ ಮಾಡುವಾಗ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು ಮತ್ತು ಮೈದಾನದಿಂದ ದೂರವಿದ್ದರು. ಮೊದಲ ಓವರ್‌ನಲ್ಲಿ ಬೌಂಡರಿಯತ್ತ ಹೋಗುತ್ತಿದ್ದ ಚೆಂಡನ್ನು ಚೇಸ್ ಮಾಡುವಾಗ ಈ ಗಾಯ ಸಂಭವಿಸಿತ್ತು.
ಸದ್ಯ ಉತ್ತಮ ಫಾರ್ಮ್‌ನಲ್ಲಿದ್ದ ಜಮಾನ್ ಅವರು ಗಾಯಗೊಂಡಿರುವುದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ. ನ್ಯೂಜಿಲೆಂಡ್ ವಿರುದ್ದದ ಎರಡನೇ ಇನಿಂಗ್ಸ್‌ನಲ್ಲಿಯೂ ಅವರು ಬ್ಯಾಟಿಂಗ್ ಮಾಡಲು ಸಾಧ್ಯವಾಗಿರಲಿಲ್ಲ.
2023 ರಲ್ಲಿ ಭಾರತದಲ್ಲಿ ನಡೆದ ವಿಶ್ವಕಪ್‌ನಲ್ಲಿ ಕೊನೆಯದಾಗಿ ಆಡಿದ ನಂತರ ಜಮಾನ್ ಚಾಂಪಿಯನ್ಸ್ ಟ್ರೋಫಿಗಾಗಿ ಪಾಕಿಸ್ತಾನ ತಂಡಕ್ಕೆ ಮರಳಿದ್ದರು. ಈ ಆರಂಭಿಕ ಆಟಗಾರನಿಗೆ ಮೊಣಕಾಲು ಸಮಸ್ಯೆಗಳ ದೀರ್ಘ ಇತಿಹಾಸವಿದೆ.