ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಭಾರತದ ವಿರುದ್ಧದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಮುಜುಗರದಿಂದ ಕಾಪಾಡಿದ ಬ್ಯಾಟರ್ ತೌಹೀದ್ ಹೃದೋಯ್ ಅಪರೂಪದ ದಾಖಲೆ ನಿರ್ಮಾಣ ಮಾಡಿದ್ದಾರೆ.
ದುಬೈನ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ 49.4 ಓವರ್ ನಲ್ಲಿ 228 ರನ್ ಗಳಿಗೆ ಆಲೌಟ್ ಆಯಿತು. ಈ ಪಂದ್ಯದಲ್ಲಿ ಬಾಂಗ್ಲಾದೇಶ ಪರ ತೌಹೀದ್ ಹೃದೋಯ್ ಶತಕ ಸಿಡಿಸಿ ಬಾಂಗ್ಲಾದೇಶ ಅತ್ಯಂತ ಕಡಿಮೆ ಮೊತ್ತಕ್ಕೆ ಕುಸಿಯುವುದನ್ನು ತಡೆದರು.
ಪಂದ್ಯದ ಆರಂಭದಲ್ಲಿ ಭಾರತೀಯ ಬೌಲರ್ ಗಳ ಆರ್ಭಟಕ್ಕೆ ತತ್ತರಿಸಿ ಹೋದ ಬಾಂಗ್ಲಾದೇಶ ದಾಂಡಿಗರು ಪೆವಿಲಿಯನ್ ಪರೇಡ್ ನಡೆಸಿದರು. ಕೇವಲ 35ರನ್ ಗಳ ಅಂತರದಲ್ಲಿ ಬಾಂಗ್ಲಾದೇಶ ತಂಡ 5 ಪ್ರಮುಖ ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು. ಈ ಪೈಕಿ ಮೂವರು ಬ್ಯಾಟರ್ ಗಳು ಶೂನ್ಯಕ್ಕೆ ಔಟಾಗಿದ್ದು, ಬಾಂಗ್ಲಾದೇಶಕ್ಕೆ ನುಂಗಲಾರದ ತುತ್ತಾಯಿತು. ಈ ಹಂತದಲ್ಲಿ ಜೊತೆಗೂಡಿದ ತೌಹೀದ್ ಹೃದೋಯ್ ಮತ್ತು ಜೇಕರ್ ಅಲಿ ಬಾಂಗ್ಲಾದೇಶ ತಂಡವನ್ನು ಮುಜುಗರದಿಂದ ಪಾರು ಮಾಡಿದರು.
ಈ ಜೋಡಿ ಬಾಂಗ್ಲಾದೇಶ ಪರ 154 ರನ್ ಗಳ ಅಮೋಘ ಜೊತೆಯಾಟವಾಡಿತು. ಜೇಕರ್ ಅಲಿ 114 ಎಸೆತಗಳಲ್ಲಿ 64 ರನ್ ಗಳಿಸಿ ಶಮಿ ಬೌಲಿಂಗ್ ನಲ್ಲಿ ಔಟಾದರೆ, ಹೃದೋಯ್ 118 ಎಸೆತಗಳಲ್ಲಿ ಶತಕ ಸಿಡಿಸಿ ಇನ್ನಿಂಗ್ಸ್ ಕೊನೆಯಲ್ಲಿ ವಿಕೆಟ್ ಒಪ್ಪಿಸಿದರು. ಜೇಕರ್ ಅಲಿ ಬಳಿಕ ರಿಶಾದ್ ಹುಸೇನ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರೂ ಅವರ ರನ್ ಗಳಿಕೆ 18ಕ್ಕೇ ಸೀಮಿತವಾಯಿತು. ಅಂತಿಮವಾಗಿ ಬಾಂಗ್ಲಾದೇಶ ತಂಡ 49.4 ಓವರ್ ನಲ್ಲಿ 228 ರನ್ ಗಳಿಗೆ ಆಲೌಟ್ ಆಯಿತು.
ಪದಾರ್ಪಣೆ ಟೂರ್ನಿಯಲ್ಲೇ ಶತಕ
ಇನ್ನು ಈ ಪಂದ್ಯದಲ್ಲಿ ಶತಕದ ಮೂಲಕ ತೌಹೀದ್ ಹೃದೋಯ್ ತಮ್ಮ ಮೊದಲ ಚಾಂಪಿಯನ್ಸ್ ಟ್ರೋಫಿ ಇನ್ನಿಂಗ್ಸ್ ನಲ್ಲೇ ಶತಕ ಸಿಡಿಸಿದ ಸಾಧನೆ ಮಾಡಿದ್ದು, ಈ ದಾಖಲೆ ಬರೆದ ಜಗತ್ತಿನ 9ನೇ ಆಟಗಾರ ಎಂಬ ಕೀರ್ತಿಗೆ ಭಾಜನರಾದರು. ಅಂತೆಯೇ ಈ ಸಾಧನೆ ಮಾಡಿದ ಬಾಂಗ್ಲಾದೇಶದ 2ನೇ ಆಟಗಾರ ಎಂಬ ಕೀರ್ತಿಗೂ ಭಾಜನರಾಗಿದ್ದು, ಇದಕ್ಕೂ ಮೊದಲು ಈ ಸಾಧನೆಯನ್ನು 2017ರಲ್ಲಿ ಇಂಗ್ಲೆಂಡ್ ವಿರುದ್ಧ ತಮೀಮ್ ಇಕ್ಬಾಲ್ ನಿರ್ಮಿಸಿದ್ದರು. ಅಂದು ತಮೀಮ್ 128ರನ್ ಗಳಿಸಿದ್ದರು. ಅಂತೆಯೇ ಈ ಸಾಧನೆ ಮಾಡಿದ 2ನೇ ಆರಂಭಿಕನಲ್ಲದ ಆಟಗಾರ ಎಂಬ ಕೀರ್ತಿಗೂ ತೌಹೀದ್ ಭಾಜನರಾಗಿದ್ದು, 2002ರಲ್ಲಿ ಭಾರತದ ಮಹಮದ್ ಕೈಫ್ ಅಜೇಯ 111 ರನ್ ಸಿಡಿಸಿ ಈ ಸಾಧನೆ ಮಾಡಿದ ಮೊದಲ ಆರಂಭಿಕನಲ್ಲದ ಆಟಗಾರ ಎಂಬ ಕೀರ್ತಿ ಭಾಜನರಾಗಿದ್ದರು.
Towhid Hridoy 100* - ninth player to score hundred in debut innings in CT
Second for Bangladesh after Tamim Iqbal (128 vs Eng The Oval 2017)
Second non-opener after Mohd Kaif (111* vs Zim Colombo RPS 2002)
ಐಸಿಸಿ ಟೂರ್ನಿಯಲ್ಲಿ ಭಾರತದ ವಿರುದ್ಧ ಶತಕ
ಅಂತೆಯೇ ಐಸಿಸಿಯ ಟೂರ್ನಿಯಲ್ಲಿ ಭಾರತದ ವಿರುದ್ಧ ಶತಕ ಸಿಡಿಸಿದ ಬಾಂಗ್ಲಾದೇಶದ ಮೊದಲ ಆಟಗಾರ ಎಂಬ ಕೀರ್ತಿಗೂ ತೌಹೀದ್ ಪಾತ್ರರಾಗಿದ್ದಾರೆ. ಈ ಹಿಂದೆ ಯಾವುದೇ ಐಸಿಸಿ ಟೂರ್ನಿಗಳಲ್ಲಿ ಬಾಂಗ್ಲಾದೇಶದ ಯಾವೋಬ್ಬ ಬ್ಯಾಟರ್ ಕೂಡ ಭಾರತ ತಂಡದ ವಿರುದ್ಧ ಶತಕ ಗಳಿಸಿರಲಿಲ್ಲ.
ಜೇಕರ್ ಅಲಿ-ತೌಹೀದ್ ದಾಖಲೆಯ ಜೊತೆಯಾಟ
ಇನ್ನು ಇಂದಿನ ಪಂದ್ಯದಲ್ಲಿ ಕೇವಲ 35 ರನ್ ಗಳಿಗೇ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಬಾಂಗ್ಲಾದೇಶಕ್ಕೆ ನೆರವಾಗಿದ್ದು, ಜೇಕರ್ ಅಲಿ-ತೌಹೀದ್ ದಾಖಲೆಯ ಜೊತೆಯಾಟ. ಈ ಜೋಡಿ ಬರೊಬ್ಬರಿ 154 ರನ್ ಗಳ ಜೊತೆಯಾಟವಾಡಿತು. ತೌಹೀದ್ ಹೃದೋಯ್ (100 ರನ್)ಶತಕ ಸಿಡಿಸಿದರೆ, ಜೇಕರ್ ಅಲಿ (64 ರನ್) ಅರ್ಧಶತಕ ಸಿಡಿಸಿ ಬಾಂಗ್ಲಾದೇಶಕ್ಕೆ ನೆರವಾದರು. ಆ ಮೂಲಕ ಈ ಜೋಡಿ ಚಾಂಪಿಯನ್ಸ್ ಟ್ರೋಫಿ ಸರಣಿಯಲ್ಲಿ 6ನೇ ವಿಕೆಟ್ ನಲ್ಲಿ ಗರಿಷ್ಠ ಜೊತೆಯಾಟವಾಡಿದ ಮೊದಲ ಜೋಡಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಈ ಹಿಂದೆ 2006ರಲ್ಲಿ ಮೊಹಾಲಿಯಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಜಸ್ಟಿನ್ ಕೆಂಪ್ ಮತ್ತು ಮಾರ್ಕ್ ಬೌಚರ್ ಜೋಡಿ 131 ರನ್ ಗಳ ಜೊತೆಯಾಟವಾಡಿತ್ತು. ಇದು ಚಾಂಪಿಯನ್ಸ್ ಟ್ರೋಫಿ ಸರಣಿ ಇತಿಹಾಸದಲ್ಲಿ 6ನೇ ವಿಕೆಟ್ ನಲ್ಲಿ ದಾಖಲಾದ ಗರಿಷ್ಠ ಜೊತೆಯಾಟವಾಗಿತ್ತು.
Highest partnership for 6th wkt or below in Champions Trophy
152* Towhid Hridoy & Jaker Ali vs Ind Dubai 2025
131 Justin Kemp & Mark Boucher vs Pak Mohali 2006
122 Chris Cairns & Chris Harris vs Ind Nairobi 2000
117 Rahul Dravid & Mohd Kaif vs Zim Colombo RPS 2002