ಲಾಹೋರ್: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆಯೋಜನೆ ವಿಚಾರವಾಗಿ ಭಾರತದ ವಿರುದ್ಧದ ಪಾಕಿಸ್ತಾನದ ಅಸಮಾಧಾನ ಟೂರ್ನಿ ಆರಂಭವಾದರೂ ಮುಂದುವರೆದಿದ್ದು, ಪಾಕ್ ಮಾಜಿ ಕ್ರಿಕೆಟಿಗ ಸಕ್ಲೈನ್ ಮುಷ್ತಾಕ್ ಭಾರತಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಪ್ರಚೋದನೆ ನೀಡಿದ್ದಾರೆ.
ಹೌದು.. ಪಾಕಿಸ್ತಾನದಲ್ಲಿ ಆಯೋಜನೆಯಾಗಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ತಂಡವು ಪಾಕಿಸ್ತಾನದಲ್ಲಿ ಪಂದ್ಯಾವಳಿ ಆಡಲು ನಿರಾಕರಿಸಿದ್ದು, ಇದರಿಂದಾಗಿ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ನಡೆಯುತ್ತಿದೆ. ಬಿಸಿಸಿಐನ ಇಂತಹ ಬೇಡಿಕೆಗಳು ತರ್ಕಬದ್ಧವಲ್ಲ. ಹೀಗಾಗಿ ಪಾಕ್ ಪಡೆ ಈ ಸಲ ಭಾರತ ತಂಡವನ್ನು ಸೋಲಿಸಿ ತಕ್ಕ ಪಾಠ ಕಲಿಸಬೇಕು ಸಖ್ಲೈನ್ ಮುಷ್ತಾಕ್ ಆಗ್ರಹಿಸಿದ್ದಾರೆ.
ಭಾರತ ಸೋಲಿಸಲು ಕರೆ
ಇದೇ ವೇಳೆ ಇದೇ ಫೆಬ್ರವರಿ 23ರಂದು ನಡೆಯಲಿರುವ ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯದ ಕುರಿತೂ ಮಾತನಾಡಿರುವ ಮುಷ್ತಾಕ್ ಭಾರತವನ್ನು ಸೋಲಿಸಿ ಅವರಿಗೆ ಗರ್ವಭಂಗ ಮಾಡಬೇಕು ಎಂದು ಹೇಳಿದ್ದಾರೆ. ಪಾಕಿಸ್ತಾನದ ಚಾನೆಲ್ ಚರ್ಚೆಯಲ್ಲಿ ಕಾಣಿಸಿಕೊಂಡ ಸಖ್ಲೈನ್ ಮುಷ್ತಾಕ್, 'ಈ ಬಾರಿ ಪಾಕಿಸ್ತಾನ್ ಭಾರತಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದ್ದಾರೆ.
ವೀಸಾ ನೀಡಲಿಲ್ಲ
ಇದೇ ವೇಳೆ ಭಾರತೀಯ ರಾಯಭಾರ ಕಚೇರಿಯು ವೀಸಾ ನೀಡದಿರುವ ಘಟನೆಯನ್ನು ನೆನಪಿಸಿಕೊಂಡ ಸಖ್ಲೈನ್ ಮುಷ್ತಾಕ್, ಭಾರತದ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನಾನು ನ್ಯೂಝಿಲೆಂಡ್ ತಂಡದ ಬೌಲಿಂಗ್ ಕೋಚ್ ಆಗಿ ಕಾಣಿಸಿಕೊಳ್ಳಬೇಕಿತ್ತು. ಆದರೆ ಭಾರತೀಯ ರಾಯಭಾರ ಕಚೇರಿಯು ವೀಸಾಗಾಗಿ ನನ್ನನ್ನು ತಿಂಗಳುಗಳ ಕಾಲ ಕಾಯುವಂತೆ ಮಾಡಿತ್ತು. ನಾನು ಮೂರು ತಿಂಗಳುಗಳ ಕಾಲ ಕಾದಿದ್ದೆ. ಆದರೆ ಅವರಿಂದ ನನಗೆ ಯಾವುದೇ ಉತ್ತರ ಸಿಕ್ಕಿರಲಿಲ್ಲ. ಹೀಗಾಗಿ ನಾನು ನ್ಯೂಝಿಲೆಂಡ್ ತಂಡದೊಡನೆ ಕಾರ್ಯ ನಿರ್ವಹಿಸಲು ಸಾಧ್ಯವಾಗಿರಲಿಲ್ಲ ಎಂದು ಸಖ್ಲೈನ್ ಮುಷ್ತಾಕ್ ಹೇಳಿದ್ದಾರೆ.
ಸೂಟ್ ಧರಿಸಿದರೆ ನಾಗರಿಕರಾಗಲ್ಲ..
ಪಾಕಿಸ್ತಾನದ ಯುವಕರು ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಅವರನ್ನು ನೋಡಲು ಬಯಸುತ್ತಾರೆ. ಆದರೆ ಇವರೆಲ್ಲಾ ಯಾವ ಲೋಕದಲ್ಲಿದ್ದಾರೆ? ಏನನ್ನು ಸಾಧಿಸಲು ಬಯಸುತ್ತಾರೆಂದು ನನಗೆ ತಿಳಿಯುತ್ತಿಲ್ಲ. ಇವರು ಯಾವಾಗ ಸುಧಾರಿಸುತ್ತಾರೆ? ಇವರ ಮನಸ್ಥಿತಿ ಯಾವಾಗ ಬದಲಾಗುತ್ತೊ ಎಂಬುದೇ ನನ್ನ ಪ್ರಶ್ನೆ. ಟೈ ಧರಿಸಿ ಇಂಗ್ಲಿಷ್ ಮಾತನಾಡಿದರೆ, ನೀವು ನಾಗರಿಕರಾಗಿದ್ದೀರಿ ಎಂದು ನೀವು ಭಾವಿಸುತ್ತೀರಿ.
ಆದರೆ ಅದಲ್ಲ ನಾಗರೀಕತೆ ಅದಲ್ಲ ಎಂಬುದನ್ನು ಅವರಿಗೆ ಅರ್ಥ ಮಾಡಿಸಬೇಕು. ಇದಕ್ಕಾಗಿ ಪಾಕಿಸ್ತಾನವು ಒಂದು ನಿಲುವನ್ನು ತೆಗೆದುಕೊಂಡು ಅವರಿಗೆ ತಕ್ಕ ಪಾಠ ಕಲಿಸಬೇಕು. ಈ ಮೂಲಕ ಭಾರತೀಯ ಕ್ರಿಕೆಟ್ ಮಂಡಳಿಯ ಅವಿವೇಕದ ತಂತ್ರಗಳಿಗೆ ಪ್ರತ್ಯುತ್ತರ ನೀಡಬೇಕೆಂದು ಪಿಸಿಬಿಯನ್ನು ಸಖ್ಲೈನ್ ಮುಷ್ತಾಕ್ ಒತ್ತಾಯಿಸಿದ್ದಾರೆ.
ಅಂದಹಾಗೆ ಚಾಂಪಿಯನ್ಸ್ ಟ್ರೋಫಿಯ 5ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಫೆಬ್ರವರಿ 23 ರಂದು ದುಬೈನ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದೆ.