ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ನಾಳೆ ಭಾರತ-ಪಾಕಿಸ್ತಾನ ತಂಡಗಳ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯುತ್ತಿದ್ದು, ಇದಕ್ಕೂ ಮೊದಲೇ ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಭಾರತ ತಂಡದ ರನ್ ಮೆಷಿನ್ ವಿರಾಟ್ ಕೊಹ್ಲಿ ಅವರ ಟೆಕ್ನಿಕಲ್ ವೀಕ್ನೆಸ್ ಬಹಿರಂಗ ಪಡಿಸಿದ್ದಾರೆ.
ಹೌದು.. ಭಾರತದ ರನ್ ಮೆಷಿನ್ ಎಂದೇ ಖ್ಯಾತಿ ಗಳಿಸಿರುವ ವಿರಾಟ್ ಕೊಹ್ಲಿ ಇತ್ತೀಚಿನ ದಿನಗಳಲ್ಲಿ ಅದಕ್ಕೆ ತದ್ವಿರುದ್ಧವಾಗಿ ರನ್ ಗಳಿಸದೇ ಬೇಗನೇ ಔಟ್ ಆಗುತ್ತಿದ್ದಾರೆ. ವಿರಾಟ್ ಕೊಹ್ಲಿ ಅವರ ಫಾರ್ಮ್ ಗಿಂತ ಹೆಚ್ಚಾಗಿ, ಅವರು ಪದೇ ಪದೇ ಒಂದೇ ರೀತಿಯಲ್ಲಿ ಔಟ್ ಆಗುತ್ತಿರುವುದು ತಂಡಕ್ಕೆ ತಲೆನೋವಾಗಿದೆ.
ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲೂ ಕೊಹ್ಲಿ ಆಫ್-ಸ್ಟಂಪ್ ಹೊರಗೆ ಹಾಕುವ ಎಸೆತಗಳಿಗೆ ಔಟ್ ಆಗುತ್ತಿದ್ದರು. ಆದರೆ ಇದೀಗ ಏಕದಿನ ಕ್ರಿಕೆಟ್‌ನಲ್ಲಿ ಕೊಹ್ಲಿ ಮಣಿಕಟ್ಟಿನ ಸ್ಪಿನ್ ವಿರುದ್ಧ ಬ್ಯಾಟ್ ಬೀಸಲು ಕಷ್ಟಪಡುತ್ತಿದ್ದಾರೆ. ವಾಸ್ತವವಾಗಿ, ಏಕದಿನ ಪಂದ್ಯಗಳಲ್ಲಿ ಕೊಹ್ಲಿಯ ಕೊನೆಯ ಆರು ಔಟ್‌ಗಳಲ್ಲಿ ಐದು ಮಣಿಕಟ್ಟಿನ ಸ್ಪಿನ್ ವಿರುದ್ಧವಾಗಿವೆ.
ಇದಕ್ಕೆ ಇತ್ತೀಚೆಗೆ ಭಾರತದ ಚಾಂಪಿಯನ್ಸ್ ಟ್ರೋಫಿ 2025 ರ ಬಾಂಗ್ಲಾದೇಶದ ವಿರುದ್ಧದ ಆರಂಭಿಕ ಪಂದ್ಯ ಹೊಸ ಸೇರ್ಪಡೆಯಾಗಿದೆ. ಈ ಪಂದ್ಯದಲ್ಲಿ, ಕೊಹ್ಲಿ 38 ಎಸೆತಗಳಲ್ಲಿ 22 ರನ್ ಗಳಿಸಿ ಬಾಂಗ್ಲಾದೇಶದ ಮಣಿಕಟ್ಟಿನ ಸ್ಪಿನ್ನರ್ ರಿಷಾದ್ ಹೊಸೈನ್ ಗೆ ಔಟ್ ಆಗಿದ್ದರು. ಈ ಬಗ್ಗೆ ಭಾರತದ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಮಾತನಾಡಿದ್ದು, ಕೊಹ್ಲಿ ಎಲ್ಲಿ ತಪ್ಪು ಮಾಡುತ್ತಿದ್ದಾರೆ ಎಂಬುದನ್ನು ನಿಖರವಾಗಿ ವಿಶ್ಲೇಷಿಸಿದ್ದಾರೆ.
ಕ್ರಿಕೆಟ್ ವೆಬ್ ಸೈಟ್ ನೊಂದಿಗೆ ಮಾತನಾಡಿರುವ ಗವಾಸ್ಕರ್. 'ಕೊಹ್ಲಿಯ ತಂತ್ರದ ಒಂದು ನಿರ್ದಿಷ್ಟ ಅಂಶವು ಅವರಿಗೆ ಸಮಸ್ಯೆಗಳನ್ನು ಉಂಟುಮಾಡುತ್ತಿದೆ. ಫೇಸ್ ಆಫ್ ದಿ ಬ್ಯಾಟ್ ತೆರೆದುಕೊಳ್ಳುವುದರಿಂದಾಗಿ ಅವರು ಸಮಸ್ಯೆ ಎದುರಿಸುತ್ತಿದ್ದಾರೆ. ಆಸ್ಟ್ರೇಲಿಯಾದಲ್ಲೂ ಕ್ವಿಕ್‌ಗಳ ವಿರುದ್ಧ ಆಡುವಾಗಲೂ ಅದೇ ರೀತಿ ಸಂಭವಿಸಿತ್ತು. ಬ್ಯಾಟ್ ಮುಖವು ತೆರೆದುಕೊಳ್ಳುವುದು, ಕವರ್‌ಗಳ ಮೂಲಕ ಆಡಲು ನೋಡುವುದು, ಬ್ಯಾಟ್‌ನ ಮುಖವನ್ನು ತೆರೆಯುವುದು ಕೊಹ್ಲಿ ಅವರನ್ನು ತೊಂದರೆಗೆ ಸಿಲುಕಿಸುತ್ತಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಂತೆಯೇ ಕೊಹ್ಲಿ ತಮ್ಮ ಆಟದ ಈ ತಾಂತ್ರಿಕ ಅಂಶವನ್ನು ಸರಿಪಡಿಸಿಕೊಳ್ಳಬೇಕು ಎಂದು ಹೇಳಿರುವ ಗವಾಸ್ಕರ್, ಇಂತಹ ತಾಂತ್ರಿಕ ಅಂಶಗಳನ್ನು ಅವರು ಗಮನಿಸಬೇಕು. ಅವರು ಈಗ ಬ್ಯಾಟಿಂಗ್ ತಂತ್ರಗಾರಿಕೆ ಕುರಿತು ಗಂಭೀರವಾಗಿ ಚಿಂತಿಸಬೇಕು. ನೀವು ಪದೇ ಪದೇ ಒಂದೇ ರೀತಿಯ ಬೌಲಿಂಗ್ ಗೆ ಔಟಾಗುತ್ತಿದ್ದೀರಿ ಎಂದರೆ ಅದು ನಿಜಕ್ಕೂ ಯೋಚಿಸಬೇಕಾದ ವಿಚಾರವೇ ಎಂದು ಗವಾಸ್ಕರ್ ಹೇಳಿದರು.
ಅಂದಹಾಗೆ ಕೊಹ್ಲಿ ಈ ಟೂರ್ನಮೆಂಟ್‌ನಲ್ಲಿ ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗುವ ಗುರಿಯನ್ನು ಹೊಂದಿದ್ದಾರೆ. 36 ವರ್ಷದ ಕೊಹ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಪ್ರಸ್ತುತ 551 ರನ್‌ಗಳನ್ನು ಗಳಿಸಿದ್ದು, ಕ್ರಿಸ್ ಗೇಲ್‌ಗಿಂತ 240 ಹಿಂದಿದ್ದಾರೆ.
ಕೊಹ್ಲಿ 2009 ರಲ್ಲಿ ಮೊದಲ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಆಡಿದ್ದರು, ನಂತರ 2013 ರಲ್ಲಿ ಎಂಎಸ್ ಧೋನಿ ನೇತೃತ್ವದಲ್ಲಿ ಪ್ರಶಸ್ತಿ ಗೆದ್ದ ತಂಡದ ಭಾಗವಾಗಿದ್ದರು. 2017 ರಲ್ಲಿ, ಕೊಹ್ಲಿ ಭಾರತವನ್ನು ಫೈನಲ್‌ಗೆ ಕರೆದೊಯ್ದಿದ್ದರು, ಅಲ್ಲಿ ಅವರು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸೋತಿದ್ದರು. ಇದೀಗ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ನಾಲ್ಕನೇ ಬಾರಿಗೆ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಫೆಬ್ರವರಿ 23 ರ ಭಾನುವಾರದಂದು ದುಬೈನಲ್ಲಿ ಭಾರತ ತನ್ನ ಎರಡನೇ ಗ್ರೂಪ್ ಎ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಲಿದ್ದು, ಇಲ್ಲಿ ಭಾರತಕ್ಕೆ ಗೆಲುವು ಸಿಕ್ಕರೆ ನಾಕೌಟ್ ಹಂತಕ್ಕೆ ಅರ್ಹತೆ ಖಚಿತವಾಗುತ್ತದೆ.