ಅಹ್ಮದಾಬಾದ್: ಕೇರಳ ಮತ್ತು ಗುಜರಾತ್ ನಡುವಿನ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯ ಅಕ್ಷರಶಃ ಪ್ರೇಕ್ಷಕರಿಗೆ ಸಿನಿಮಾ ತೋರಿಸಿದೆ.
ಹೌದು.. ರಣಜಿ ಕ್ರಿಕೆಟ್ ಟೂರ್ನಿಯ ಮೊದಲ ಸೆಮಿಫೈನಲ್‌ನಲ್ಲಿ ಗುಜರಾತ್ ಎದುರು ಡ್ರಾ ಮಾಡಿಕೊಂಡಿರುವ ಕೇರಳ, ಎರಡನೇ ಸೆಮಿಫೈನಲ್‌ನಲ್ಲಿ ಬಲಿಷ್ಠ ಮುಂಬೈ ಎದುರು ಗೆದ್ದಿರುವ ವಿದರ್ಭ, ಫೈನಲ್‌ಗೆ ಲಗ್ಗೆ ಇಟ್ಟಿವೆ. ಕೇರಳ ತಂಡ ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದರೆ, ವಿದರ್ಭ ಮೂರನೇ ಪ್ರಶಸ್ತಿಯನ್ನು ಎದುರು ನೋಡುತ್ತಿದೆ.
ಸಿನಿಮಾ ತೋರಿಸಿದ ಕೇರಳ vs ಗುಜರಾತ್ ಪಂದ್ಯ
ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶುಕ್ರವಾರ ಮುಕ್ತಾಯವಾದ ಕೇರಳ ಮತ್ತು ಗುಜರಾತ್ ನಡುವಣ ಸೆಮಿಫೈನಲ್ ಪಂದ್ಯವು ರೋಚಕ ಡ್ರಾ ಆಯಿತು. ಆದರೆ ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಲು ನಡೆದ ಹಣಾಹಣಿಯು ಕ್ರಿಕೆಟ್‌ಪ್ರಿಯರ ಮೈನವಿರೇಳಿಸಿತು. ಹತ್ತಾರು ನಾಟಕೀಯ ತಿರುವುಗಳನ್ನು ಕಂಡ ಆಟದಲ್ಲಿ ಕೇರಳವು ಕೇವಲ 2 ರನ್ ಮುನ್ನಡೆ ಸಾಧಿಸಿತು.
ಕೇರಳ ತಂಡವು ದೇಶಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ 68 ವರ್ಷಗಳ ನಂತರ ಇದೇ ಮೊದಲ ಸಲ ಪ್ರಶಸ್ತಿ ಸುತ್ತಿಗೆ ಕಾಲಿಟ್ಟಿತು. ಕೇರಳ ತಂಡವು ಮೊದಲ ಇನಿಂಗ್ಸ್‌ನಲ್ಲಿ 457 ರನ್ ಗಳಿಸಿತ್ತು. ಅದಕ್ಕುತ್ತರವಾಗಿ ನಾಲ್ಕನೇ ದಿನವಾದ ಗುರುವಾರದ ಅಂತ್ಯಕ್ಕೆ ಆತಿಥೇಯ ತಂಡವು 7 ವಿಕೆಟ್‌ಗಳಿಗೆ 429 ರನ್ ಗಳಿಸಿತ್ತು. ಪಂದ್ಯದ ಐದನೇ ಮತ್ತು ಕೊನೆಯ ದಿನದಂದು ಗುಜರಾತ್ ತಂಡಕ್ಕೆ ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಲು 29 ರನ್ ಮತ್ತು ಕೇರಳಕ್ಕೆ 3 ವಿಕೆಟ್ ಗಳಿಸುವ ಅಗತ್ಯವಿತ್ತು.
ಪಂದ್ಯವು ಕೊನೆಯ ದಿನದಾಟಕ್ಕೆ ಕಾಲಿಟ್ಟಿದ್ದರಿಂದ ಗುಜರಾತ್ ತಂಡಕ್ಕೆ ಮುನ್ನಡೆ ಅತ್ಯವಶ್ಯಕವಾಗಿತ್ತು. ಏಕೆಂದರೆ ರಣಜಿ ಟೂರ್ನಿಯ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ಡ್ರಾ ಆದರೆ ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದ ತಂಡಗಳನ್ನು ವಿಜಯಿ ಎಂದು ಘೋಷಿಸಲಾಗುತ್ತದೆ.
ಇತ್ತ ಡ್ರಾನತ್ತ ಸಾಗಿದ್ದ ಈ ಪಂದ್ಯದಲ್ಲಿ ಮುನ್ನಡೆ ಸಾಧಿಸುವ ಮೂಲಕ ಫೈನಲ್ಗೇರಲು ಗುಜರಾತ್ ತಂಡ ಮೊದಲ ಇನಿಂಗ್ಸ್‌ನಲ್ಲಿ ಕೇವಲ ಮೂರು ರನ್ಗಳ ಮುನ್ನಡೆಗಳಿಸಿದ್ದರೆ ಸಾಕಿತ್ತು. ಈ ಹಂತದಲ್ಲಿ ಗುಜರಾತ್ ಬ್ಯಾಟರ್ ಅರ್ಝಾನ್ ನಾಗಸ್ವಲ್ಲಾ ಬಾರಿಸಿದ ಚೆಂಡು ನೇರವಾಗಿ ಶಾರ್ಟ್ ಲೆಗ್‌ನಲ್ಲಿ ಫೀಲ್ಡಿಂಗ್ನಲ್ಲಿದ್ದ ಸಲ್ಮಾನ್ ನಿಝಾರ್ ಅವರ ಹೆಲ್ಮೆಟ್ಗೆ ಬಡಿದಿದೆ. ಹೆಲ್ಮೆಟ್ಗೆ ತಾಗಿ ಗಾಳಿಯಲ್ಲಿ ಹಾರಿದ ಚೆಂಡು ನೇರವಾಗಿ ಸ್ಲಿಪ್ನಲ್ಲಿದ್ದ ಸಚಿನ್ ಬೇಬಿ ಅವರ ಕೈ ಸೇರಿದೆ.
ಕ್ಯಾಚ್ ಹಿಡಿದರೂ ಔಟ್ ನೀಡದ ಅಂಪೈರ್
ಇನ್ನು ಅಂತಿಮ ವಿಕೆಟ್ ಸಿಕ್ಕ ಖುಷಿಯಲ್ಲಿ ಕೇರಳ ತಂಡದ ಫೀಲ್ಡರ್ಗಳು ಸಂಭ್ರಮಿಸಲಾರಂಭಿಸಿದರು. ಇದಾಗ್ಯೂ ಫೀಲ್ಡ್ ಅಂಪೈರ್ ಔಟ್ ನೀಡಿರಲಿಲ್ಲ. ಆ ಬಳಿಕ ಅಂಪೈರ್ಗಳು ನಿಯಮಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಫಿಲ್ ಹ್ಯೂಸ್ ಸಾವಿನ ಬಳಿಕ ಹೆಲ್ಮೆಟ್ ನಿಯಮದಲ್ಲಿ ಬದಲಾವಣೆ ಮಾಡಲಾಗಿರುವುದು ಕಂಡು ಬಂದಿದೆ. ಈ ನಿಯಮದಂತೆ ಫೀಲ್ಡ್ ಅಂಪೈರ್ ಔಟ್ ನೀಡಿದ್ದಾರೆ. ಅಲ್ಲಿಗೆ ಗುಜರಾತ್ ತಂಡದ ಮೊದಲ ಇನಿಂಗ್ಸ್ 455 ರನ್ಗಳಿಗೆ ಅಂತ್ಯಗೊಂಡಿತು. ಇದರೊಂದಿಗೆ ಕೇರಳ ತಂಡವು ಮೊದಲ ಇನಿಂಗ್ಸ್‌ನಲ್ಲಿ ಕೇವಲ 2 ರನ್ಗಳ ಮುನ್ನಡೆ ಪಡೆಯಿತು.
74 ವರ್ಷಗಳ ಬಳಿಕ ರಣಜಿ ಟೂರ್ನಿ ಫೈನಲ್ ಗೆ ಕೇರಳ
ಈ ಅತ್ಯಲ್ಪ ಮುನ್ನಡೆಯೊಂದಿಗೆ ಕೇರಳ ತಂಡವು 74 ವರ್ಷಗಳ ಬಳಿಕ ರಣಜಿ ಟೂರ್ನಿಯ ಫೈನಲ್ಗೇರುವಲ್ಲಿ ಯಶಸ್ವಿಯಾಗಿದೆ. 1951-52ರ ಬಳಿಕ ಇದೇ ಮೊದಲ ಬಾರಿಗೆ ಕೇರಳ ರಣಜಿ ಟ್ರೋಫಿ ಫೈನಲ್ ಗೇರಿದೆ.