ಏಕದಿನ ಕ್ರಿಕೆಟ್ನಲ್ಲಿ ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ವೇಗವಾಗಿ 14 ಸಾವಿರ ರನ್ ಪೂರೈಸಿ ವಿಶ್ವದಾಖಲೆ ಬರೆದಿದ್ದಾರೆ. ಚಾಂಪಿಯನ್ಸ್ ಟ್ರೋಫಿಯ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 15 ರನ್ ಬಾರಿಸುವ ಮೂಲಕ ಈ ವಿಶ್ವದಾಖಲೆ ಬರೆದಿದ್ದಾರೆ.
ಕೊಹ್ಲಿ ಈವರೆಗೂ ಒಟ್ಟು 298 ಪಂದ್ಯಗಳು, 287 ಇನ್ನಿಂಗ್ಸ್ ನಲ್ಲಿ 14 ಸಾವಿರ ರನ್ ಕಲೆಹಾಕಿದ್ದಾರೆ. ಇದೇ ವೇಳೆ ಏಕದಿನದಲ್ಲಿ 14 ಸಾವಿರ ರನ್ ಪೂರೈಸಿದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೂ ಕೊಹ್ಲಿ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಈ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು. 350 ಇನ್ನಿಂಗ್ಸ್ಗಳಲ್ಲಿ ಸಚಿನ್ 14 ಸಾವಿರ ರನ್ ಪೂರೈಸಿದ್ದರು. ಸಚಿನ್ ನಂತರ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಕುಮಾರ್ ಸಂಗಕ್ಕಾರ 14,000 ರನ್ ಗಡಿ ದಾಟಿದ ಎರಡನೇ ಆಟಗಾರ ಎನಿಸಿದ್ದಾರೆ. 378 ಇನ್ನಿಂಗ್ಸ್ ಗಳಲ್ಲಿ ಸಂಗಕ್ಕಾರ ಈ ದಾಖಲೆ ಬರೆದಿದ್ದರು.
ಕೊಹ್ಲಿ ಮುಂದಿದೆ ಮತ್ತೊಂದು ವಿಶ್ವದಾಖಲೆ
ಕೊಹ್ಲಿ ಮುಂದಿರುವ ಮತ್ತೊಂದು ವಿಶ್ವದಾಖಲೆ ಎಂದರೆ ಅದು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ 3ನೇ ಆಟಗಾರನಾಗುವ ಅವಕಾಶ. ಹೌದು... ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರನ್ನು ಹಿಂದಿಕ್ಕಲು 103 ರನ್ಗಳ ಅಗತ್ಯ ಇದೆ. ಕೊಹ್ಲಿ ಭಾರತ ಪರ 545 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು 27,381 ರನ್ ಗಳಿಸಿದ್ದಾರೆ. ಪಾಂಟಿಂಗ್ ತಮ್ಮ ಕರಿಯರ್ನಲ್ಲಿ ಆಸ್ಟ್ರೇಲಿಯಾ ಪರ 560 ಪಂದ್ಯಗಳಲ್ಲಿ 27,483 ರನ್ ಗಳಿಸಿದ್ದಾರೆ. ಸಚಿನ್ (34,357) ಮತ್ತು ಸಂಗಕ್ಕಾರ (28,016) ಮೊದಲ ಎರಡು ಸ್ಥಾನದಲ್ಲಿದ್ದಾರೆ.