ಮಾಧ್ಯಮಗಳ ಮುಂದೆ ಕುಳಿತು ಎದುರಾಳಿ ತಂಡದ ಆಟಗಾರನನ್ನು ಹೊಗಳುವುದು ಅಷ್ಟು ಸುಲಭವಲ್ಲ. ಸಾಮಾನ್ಯವಾಗಿ ಹೀಗೆ ಯಾರಾದರೂ ಮಾಡುವುದು ಅಪರೂಪದಲ್ಲೇ ಅಪರೂಪ. ಆದರೆ, ಪಾಕಿಸ್ತಾನದ ನಾಯಕ ಮೊಹಮ್ಮದ್ ರಿಜ್ವಾನ್ ಇದಕ್ಕೆ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ ಅವರನ್ನು ಹೊಗಳುವುದು ಮುಖ್ಯವಾಗಿತ್ತು.
ರನ್ ಗಳಿಸಲು ಹೆಣಗಾಡುತ್ತಿದ್ದಾರೆ ಎಂದು ಹಲವರು ಟೀಕೆ ಮಾಡುತ್ತಿದ್ದರು. ಆದರೆ, ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ 111 ಎಸೆತಗಳಲ್ಲಿ ಏಳು ಬೌಂಡರಿಗಳ ನೆರವಿನಿಂದ ಅಜೇಯ 100 ರನ್ ಗಳಿಸಿ ಫಾರ್ಮ್‌ಗೆ ಮರಳಿದ್ದಾರೆ. ಇದರೊಂದಿಗೆ ಏಕದಿನ ಮಾದರಿಯಲ್ಲಿ ವೇಗವಾಗಿ 14,000 ರನ್ ಗಳಿಸಿದ ಸಾಧನೆ ಮಾಡಿದರು.
ತಮ್ಮ 36ನೇ ವಯಸ್ಸಿನಲ್ಲೂ ಉತ್ತಮ ಫಿಟ್ನೆಸ್ ಕಾಯ್ದುಕೊಂಡಿರುವ ವಿರಾಟ್ ಕೊಹ್ಲಿ ಅವರಿಗೆ ಬಹುತೇಕರು ಫಿದಾ ಆಗಿದ್ದಾರೆ. ಪಾಕಿಸ್ತಾನದ ಸೋಲಿನ ನಂತರ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ ರಿಜ್ವಾನ್ ಅವರಿಗೆ ಮಾಧ್ಯಮಗಳಿಂದ ಹಲವಾರು ಪ್ರಶ್ನೆಗಳು ಎದುರಾಗುತ್ತಿದ್ದವು. ಆಗ ಅವರೆಲ್ಲರ ಪ್ರಶ್ನೆಗಳಿಗೂ ಬ್ರೇಕ್ ಹಾಕಿದ ರಿಜ್ವಾನ್, ಮೊದಲು ವಿರಾಟ್ ಕೊಹ್ಲಿ ಅವರ ಬಗ್ಗೆ ಮಾತನಾಡೋಣ ಎಂದರು.
'ಮೊದಲು ನಾವು ವಿರಾಟ್ ಕೊಹ್ಲಿ ಬಗ್ಗೆ ಮಾತನಾಡೋಣ. ಅವರ ಕಠಿಣ ಪರಿಶ್ರಮ ನನಗೆ ಆಶ್ಚರ್ಯವಾಗಿದೆ. ಅವರು ತುಂಬಾ ಶ್ರಮಿಸಿರಬೇಕು. ಅವರು ಫಾರ್ಮ್‌ನಲ್ಲಿಲ್ಲ ಎಂದು ಜಗತ್ತು ಹೇಳುತ್ತದೆ. ಆದರೆ, ಅವರು ಜಗತ್ತು ಕಾಯುತ್ತಿರುವ ದೊಡ್ಡ ಪಂದ್ಯಗಳಲ್ಲಿ ಆಡುತ್ತಾರೆ ಮತ್ತು ಸುಲಭವಾಗಿ ಚೆಂಡನ್ನು ಬಾರಿಸುತ್ತಾರೆ. ನಾವು ಅವರಿಗೆ ರನ್ ನೀಡಲು ಬಯಸುವುದಿಲ್ಲ. ಆದರೆ, ಅವರು ನಮ್ಮಿಂದ ರನ್‌ಗಳನ್ನು ಪಡೆದುಕೊಳ್ಳುತ್ತಾರೆ' ಎಂದು ತಿಳಿಸಿದ್ದಾರೆ.
'ಅವರ ಫಿಟ್‌ನೆಸ್ ಮಟ್ಟ ಮತ್ತು ಕಠಿಣ ಪರಿಶ್ರಮವನ್ನು ನಾನು ಖಂಡಿತವಾಗಿ ಪ್ರಶಂಸಿಸುತ್ತೇನೆ. ಏಕೆಂದರೆ, ಅವರು ಕ್ರಿಕೆಟಿಗರು ಮತ್ತು ನಾವು ಕ್ರಿಕೆಟಿಗರು. ನಾವು ಅವರ ವಿಕೆಟ್ ಕೀಳಲು ತುಂಬಾ ಪ್ರಯತ್ನಿಸಿದ್ದೇವೆ, ಆದರೆ ಅದು ಸಾಧ್ಯವಾಗಲಿಲ್ಲ. ಅವರು ಸಾಕಷ್ಟು ಶ್ರಮಪಟ್ಟಿದ್ದಾರೆ. ಫಾರ್ಮ್‌ನಿಂದ ಹೊರಗಿದ್ದಾರೆ ಎಂದು ಇಡೀ ಜಗತ್ತು ಟೀಕಿಸಿತು. ಆದರೆ, ಅವರು ಇಂತಹ ದೊಡ್ಡ ಪಂದ್ಯದಲ್ಲಿ ಫಾರ್ಮ್‌ಗೆ ಮರಳಿದ್ದಾರೆ' ಎಂದು ಅವರು ಹೇಳಿದರು.
ಪಂದ್ಯದ ಬಗ್ಗೆ ಹೇಳುವುದಾದರೆ, ನೀವು ನಿರಾಶೆಗೊಂಡಿದ್ದೀರಿ. ಏಕೆಂದರೆ, ನೀವು ಸೋತಾಗ ನಿಮಗೆ ಕಷ್ಟದ ದಿನಗಳು ಬರುತ್ತವೆ ಮತ್ತು ಹಲವಾರು ಪ್ರಶ್ನೆಗಳು ಉದ್ಭವಿಸುತ್ತವೆ. ಆದರೆ, ಈ ಪಂದ್ಯವನ್ನು ನೋಡಿದರೆ ಯಾವ ವಿಭಾಗದಲ್ಲೂ ತಪ್ಪಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಅಬ್ರಾರ್ ಅವರ ಬೌಲಿಂಗ್ ಈ ಪಂದ್ಯದಲ್ಲಿ ಹೆಚ್ಚು ಪಾಸಿಟಿವ್ ಆಯಿತು. ನಾವು ಯಾವುದೇ ತಪ್ಪು ಮಾಡಿಲ್ಲ. ಮೂರೂ ವಿಭಾಗಗಳಲ್ಲೂ ತಪ್ಪಾಗಿದೆ. ಅದಕ್ಕಾಗಿಯೇ ನಾವು ಪಂದ್ಯದಲ್ಲಿ ಸೋಲು ಕಾಣಬೇಕಾಯಿತು ಎಂದು ಹೇಳಿದರು.
ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಭಾರತ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನ ಮೂಲಕ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಭಾರತ ಸೆಮಿಫೈನಲ್ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದ್ದು, ಪಾಕಿಸ್ತಾನವನ್ನು ಪಂದ್ಯಾವಳಿಯಿಂದಲೇ ಹೊರದಬ್ಬಿದೆ. ಪಾಕಿಸ್ತಾನದ ಸೆಮಿಫೈನಲ್ ಭವಿಷ್ಯ ಈಗ ಬಾಂಗ್ಲಾದೇಶದ ಕೈಯಲ್ಲಿದೆ. ಸೋಮವಾರ ರಾವಲ್ಪಿಂಡಿಯಲ್ಲಿ ನಡೆಯಲಿರುವ ಪಂದ್ಯದಲ್ಲಿ ನ್ಯೂಜಿಲೆಂಡ್ ಅನ್ನು ಸೋಲಿಸಿದರೆ ಪಾಕಿಸ್ತಾನಕ್ಕೆ ಅವಕಾಶ ಸಿಗುವ ಸಾಧ್ಯತೆ ಇದೆ.
ವಿರಾಟ್ ಕೊಹ್ಲಿ ತಮ್ಮ 51ನೇ ಅಂತಾರಾಷ್ಟ್ರೀಯ ಏಕದಿನ ಶತಕವನ್ನು ಕೊನೆಯ ಎಸೆತದಲ್ಲಿ ಪೂರೈಸುವ ಜೊತೆಗೆ ಭಾರತಕ್ಕೆ ಗೆಲುವು ತಂದುಕೊಟ್ಟರು. ಪಾಕಿಸ್ತಾನದ ವಿರುದ್ಧ ಇದು ಕೊಹ್ಲಿಯ ನಾಲ್ಕನೇ ಶತಕವಾಗಿದ್ದು, ಪಾಕಿಸ್ತಾನವನ್ನು ಮತ್ತೊಮ್ಮೆ ಕಾಡಿದ್ದಾರೆ.