ಗಾಜಿಯಾಬಾದ್: ಮದುವೆ ಮಾಡಿಕೊಳ್ಳುತ್ತೇನೆ ಎಂದು ಹೇಳಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂಬ ಮಹಿಳೆ ಆರೋಪ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಈ ಕುರಿತು ಇದೇ ಮೊದಲ ಬಾರಿಗೆ ಆರ್ ಸಿಬಿ ವೇಗಿ ಯಶ್ ದಯಾಳ್ (Yash Dayal) ಮೌನ ಮುರಿದಿದ್ದಾರೆ.
ಹೌದು.. ಮದುವೆ ಮಾಡಿಕೊಳ್ಳುವ ನೆಪದಲ್ಲಿ 'ಲೈಂಗಿಕ ಶೋಷಣೆ' ಮಾಡಿದ್ದಾರೆ ಎಂಬ ಗಾಜಿಯಾಬಾದ್‌ನ ಮಹಿಳೆಯೊಬ್ಬರ ಆರೋಪದ ಕುರಿತು ತಮ್ಮ ಮೇಲೆ ದಾಖಲಾಗಿರುವ ಎಫ್‌ಐಆರ್ ದಾಖಲಿಸಿದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ವೇಗಿ ಯಶ್ ದಯಾಳ್ ಅನಿರೀಕ್ಷಿತ ಸಂಕಷ್ಟಕ್ಕೆ ಸಿಲುಕಿದ್ದರು.
ಇತ್ತೀಚೆಗೆ ಆರ್‌ಸಿಬಿ ಪರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ಪ್ರಶಸ್ತಿಯನ್ನು ಗೆದ್ದ ದಯಾಳ್, ಈ ಲೈಂಗಿಕ ದೌರ್ಜನ್ಯ ವಿಷಯದ ಬಗ್ಗೆ ಕೊನೆಗೂ ತಮ್ಮ ಮೌನ ಮುರಿದಿದ್ದಾರೆ.
ಮಹಿಳೆಯ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಪ್ರಯಾಗ್‌ರಾಜ್ ಪೊಲೀಸರಿಗೆ ಯಶ್ ದಯಾಳ್ ಕೂಡ ದೂರು ನೀಡಿದ್ದಾರೆ. 27 ವರ್ಷದ ವೇಗಿ ಯಶ್ ದಯಾಳ್ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸುವಂತೆ ಖುಲ್ದಾಬಾದ್ ಪೊಲೀಸ್ ಠಾಣೆಗೆ ಮನವಿ ಮಾಡಿದ್ದಾರೆ.
ಯಶ್ ದಯಾಳ್ ನೀಡಿರುವು ದೂರಿನಲ್ಲಿ ಮಹಿಳೆ ತಮ್ಮ ಐಫೋನ್ ಮತ್ತು ಲ್ಯಾಪ್‌ಟಾಪ್ ಕದ್ದಿದ್ದಾರೆ ಎಂದು ಯಶ್ ಆರೋಪಿಸಿದ್ದಾರೆ.
ಯಶ್ ದಯಾಳ್ ಹೇಳಿದ್ದೇನು?
ಎಡಗೈ ವೇಗಿ ಯಶ್ ದಯಾಳ್ ಪ್ರಯಾಗ್‌ರಾಜ್ ಪೊಲೀಸರಿಗೆ 2021ರಲ್ಲಿ ಇನ್‌ಸ್ಟಾಗ್ರಾಮ್ ಮೂಲಕ ಮಹಿಳೆಯೊಂದಿಗೆ ಪರಿಚಯವಾಗಿತ್ತು. ನಂತರ ಅವರು ಪರಸ್ಪರ ಸಂವಹನ ನಡೆಸಲು ಪ್ರಾರಂಭಿಸಿದರು. ಯಶ್ ದಯಾಳ್ ಅವರು ಮಹಿಳೆ ತನಗೆ ಮತ್ತು ತನ್ನ ಕುಟುಂಬಕ್ಕೆ ವೈದ್ಯಕೀಯ ಚಿಕಿತ್ಸೆಯ ನೆಪದಲ್ಲಿ ತನ್ನಿಂದ ಲಕ್ಷಾಂತರ ರೂಪಾಯಿಗಳನ್ನು ಸಾಲ ಪಡೆದಿದ್ದಾರೆ. ಆದರೆ ಈ ವರೆಗೂ ವಾಪಸ್ ನೀಡಿಲ್ಲ ಎಂದು ಆರೋಪಿಸಿದ್ದಾರೆ.
ಅಂತೆಯೇ ಶಾಪಿಂಗ್‌ಗಾಗಿ ಆಕೆ ಪದೇ ಪದೇ ಹಣ ಸಾಲ ಪಡೆದಿದ್ದಾಳೆ ಎಂದು ಯಶ್ ದಯಾಳ್ ದೂರಿನಲ್ಲಿ ಹೇಳಿಕೊಂಡಿದ್ದಾರೆ. ಅಲ್ಲದೆ ಈ ಆರೋಪಗಳನ್ನು ಬೆಂಬಲಿಸಲು ತನ್ನ ಬಳಿ ಪುರಾವೆಗಳಿವೆ ಎಂದು ಕ್ರಿಕೆಟಿಗ ಹೇಳಿಕೊಂಡಿದ್ದು, ಸೂಕ್ತ ಸಂದರ್ಭದಲ್ಲಿ ಸೂಕ್ತ ವೇದಿಕೆಯಲ್ಲಿ ಬಹಿರಂಗಪಡಿಸುವುದಾಗಿ ಹೇಳಿದ್ದಾರೆ.
ಅಲ್ಲದೆ ಗಾಜಿಯಾಬಾದ್ ಪೊಲೀಸರಿಗೆ ಮಹಿಳೆ ತನ್ನ ವಿರುದ್ಧ ದೂರು ನೀಡಿದ್ದಾಳೆಂದು ತಿಳಿದಾಗ, ಆಕೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಿದ್ದೇನೆ ಎಂದು ಯಶ್ ದಯಾಳ್ ಹೇಳಿದ್ದಾರೆ.
ಮೂರು ಪುಟಗಳ ದೂರಿನಲ್ಲಿ, ಯಶ್ ದಯಾಳ್ ಮಹಿಳೆ ಮತ್ತು ಆಕೆಯ ಕುಟುಂಬದ ಇಬ್ಬರು ಸದಸ್ಯರು ಮತ್ತು ಇತರ ಹಲವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕೆಂದು ಒತ್ತಾಯಿಸಿದ್ದಾರೆ.
ಇಂದಿರಾಪುರಂ ಪೊಲೀಸ್ ಠಾಣೆಯಲ್ಲಿ ಭಾನುವಾರ ದಯಾಳ್ (27) ವಿರುದ್ಧ ಬಿಎನ್‌ಎಸ್ ಸೆಕ್ಷನ್ 69 (ವಿವಾಹದ ಸುಳ್ಳು ಭರವಸೆ ಸೇರಿದಂತೆ ಮೋಸದ ಮೂಲಕ ಲೈಂಗಿಕ ಸಂಭೋಗ) ಅಡಿಯಲ್ಲಿ ಮಹಿಳೆಯೊಬ್ಬಳು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜೂನ್ 21 ರಂದು ಐಜಿಆರ್‌ಎಸ್ (ಸಮಗ್ರ ದೂರು ಪರಿಹಾರ ವ್ಯವಸ್ಥೆ) ಮೂಲಕ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮಹಿಳೆಯೊಬ್ಬರು ದೂರು ನೀಡಿದ ನಂತರ ಕ್ರಮ ಕೈಗೊಳ್ಳಲಾಗಿದೆ.