ದುಬೈ: ಭಾರತ ಮತ್ತು ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್ ಪಂದ್ಯದ ಮುಕ್ತಾಯದ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ICC) ಆಟಗಾರರ ಟೆಸ್ಟ್ Ranking ಪಟ್ಟಿ ಪರಿಷ್ಕರಿಸಿದ್ದು, ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರ ಜೋ ರೂಟ್ ಮತ್ತೆ ಅಗ್ರಸ್ಥಾನಕ್ಕೇರಿದ್ದಾರೆ.
ಹೌದು.. ಇಂಗ್ಲೆಂಡ್‌ನ ಸ್ಟಾರ್ ಬ್ಯಾಟ್ಸ್‌ಮನ್ ಜೋ ರೂಟ್ ಐಸಿಸಿ ಪುರುಷರ ಟೆಸ್ಟ್ Ranking ನಲ್ಲಿ ಅಗ್ರ ಸ್ಥಾನ ಕಳೆದುಕೊಂಡ ಒಂದು ವಾರದೊಳಗೆ ಮತ್ತೆ ಅಗ್ರಸ್ಥಾನಕ್ಕೆ ಮರಳಿದ್ದಾರೆ.
888 ಅಂಕಗಳೊಂದಿಗೆ ಜೋ ರೂಟ್ ಅಗ್ರ ಸ್ಥಾನಕ್ಕೆ ಮರಳಿದ್ದು, 867 ಅಂಕಗಳನ್ನು ಹೊಂದಿರುವ ನ್ಯೂಜಿಲೆಂಡ್ ಸ್ಟಾರ್ ಆಟಗಾರ ಕೇನ್ ವಿಲಿಯಮ್ಸನ್ 2ನೇ ಸ್ಥಾನದಲ್ಲಿದ್ದಾರೆ. 862 ಅಂಕಗಳೊಂದಿಗೆ ಇಂಗ್ಲೆಂಡ್ ತಂಡ ಹ್ಯಾರಿ ಬ್ರೂಕ್ 2 ಸ್ಥಾನ ಕುಸಿದು 3ನೇ ಸ್ಥಾನದಲ್ಲಿದ್ದಾರೆ.
ಅತ್ತ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್ ಸ್ಟೀವ್ ಸ್ಮಿತ್ 816 ಅಂಕಗಳೊಂದಿಗೆ ಒಂದು ಸ್ಥಾನ ಮೇಲೇರಿದ್ದು, 4ನೇ ಸ್ಥಾನದಲ್ಲಿದ್ದರೆ 4ನೇ ಸ್ಥಾನದಲ್ಲಿದ್ದ ಭಾರತದ ಯಶಸ್ವಿ ಜೈಸ್ವಾಲ್ 801 ಅಂಕಗಳೊಂದಿಗೆ 5ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಜಾರಿದ ಗಿಲ್, ಪಂತ್
ಇನ್ನು ಇಂಗ್ಲೆಂಡ್ ವಿರುದ್ಧ ಮೊದಲೆರಡು ಟೆಸ್ಟ್ ಗಳಲ್ಲಿ ಸತತ ಶತಕ ಸಿಡಿಸಿದ್ದ ಭಾರತ ತಂಡದ ನಾಯಕ ಶುಭ್ ಮನ್ ಗಿಲ್ ಮತ್ತು ಉಪನಾಯಕ ರಿಷಬ್ ಪಂತ್ 3ನೇ ಟೆಸ್ಟ್ ಪಂದ್ಯದ ಕಳಪೆ ಪ್ರದರ್ಶನದಿಂದಾಗಿ Ranking ಪಟ್ಟಿಯಲ್ಲಿ ಮತ್ತೆ ಕುಸಿದಿದ್ದಾರೆ. 779 ಅಂಕಗಳೊಂದಿಗೆ ರಿಷಬ್ ಪಂತ್ ಒಂದು ಸ್ಥಾನ ಕುಸಿದು 8ನೇ ಸ್ಥಾನದಲ್ಲಿದ್ದರೆ, ನಾಯಕ ಶುಭ್ ಮನ್ ಗಿಲ್ 765 ಅಂಕಗಳೊಂದಿಗೆ 3 ಸ್ಥಾನ ಕುಸಿದು 9ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಉಳಿದಂತೆ ಭಾರತದ ಆಲ್‌ರೌಂಡರ್ ರವೀಂದ್ರ ಜಡೇಜಾ ಪಟ್ಟಿಯಲ್ಲಿ 34 ನೇ ಸ್ಥಾನಕ್ಕೆ ಏರಿದರು. ಲಾರ್ಡ್ಸ್‌ನಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ 72 ಮತ್ತು 2ನೇ ಇನ್ನಿಂಗ್ಸ್ ನಲ್ಲಿ ಔಟಾಗದೆ 61 ರನ್ ಗಳಿಸಿದ ನಂತರ ಜಡೇಜಾ ಐದು ಸ್ಥಾನ ಏರಿಕೆಯಾಗಿ 34 ನೇ ಸ್ಥಾನಕ್ಕೆ ತಲುಪಿದ್ದಾರೆ. ಅದೇ ಪಂದ್ಯದಲ್ಲಿ 100 ಮತ್ತು 39 ರನ್ ಗಳಿಸಿದ್ದ ಕೆಎಲ್ ರಾಹುಲ್ ಕೂಡ ಐದು ಸ್ಥಾನ ಏರಿಕೆಯಾಗಿ ಜಡೇಜಾ ಅವರಿಗಿಂತ ಒಂದು ಸ್ಥಾನ ಹಿಂದಿದ್ದಾರೆ.
ಟಾಪ್ 10 ಪಟ್ಟಿ ಸೇರಿದ ಆಸಿಸ್ ನ ಹ್ಯಾಟ್ರಿಕ್ ಹೀರೋ
ಇನ್ನು ಬೌಲರ್ ಗಳ ವಿಭಾಗದಲ್ಲಿ ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಟೆಸ್ಟ್ ಬೌಲಿಂಗ್ ಶ್ರೇಯಾಂಕದಲ್ಲಿ ಪ್ರಾಬಲ್ಯ ಮುಂದುವರಿಸಿದ್ದಾರೆ. ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ ಅವರಿಗಿಂತ 50 ಅಂಕಗಳ ಮುನ್ನಡೆಯೊಂದಿಗೆ ಅಗ್ರ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ಅಂತೆಯೇ ವಿಂಡೀಸ್ ವಿರುದ್ದ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ ಆಸ್ಟ್ರೇಲಿಯಾದ ವೇಗಿ ಸ್ಕಾಟ್ ಬೋಲ್ಯಾಂಡ್ ಗಮನಾರ್ಹ ಜಿಗಿತ ಸಾಧಿಸಿದ್ದು, ಆರು ಸ್ಥಾನಗಳ ಏರಿಕೆಯೊಂದಿಗೆ ವೃತ್ತಿಜೀವನದ ಅತ್ಯುತ್ತಮ 6ನೇ ಸ್ಥಾನಕ್ಕೆ ತಲುಪಿದ್ದಾರೆ. ಭಾರತದ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ 58 ನೇ ಸ್ಥಾನದಿಂದ 46 ನೇ ಸ್ಥಾನಕ್ಕೆ ಏರಿದ್ದಾರೆ.