ಮ್ಯಾಂಚೆಸ್ಟರ್: ಭಾರತ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಪರ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಜೋ ರೂಟ್ (Joe Root) ಕ್ರಿಕೆಟ್ ಜಗತ್ತಿನ ಇಬ್ಬರು ದೈತ್ಯ ಆಟಗಾರರ ದಾಖಲೆ ಹಿಂದಿಕ್ಕಿದ್ದಾರೆ.
ಹೌದು.. ಲಂಡನ್ ನ ಮ್ಯಾಂಚೆಸ್ಟರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟ ಮುಂದುವರೆಸಿರುವ ಇಂಗ್ಲೆಂಡ್ ತಂಡ 2 ವಿಕೆಟ್ ನಷ್ಟಕ್ಕೆ 323 ರನ್ ಗಳಿಸಿದ್ದು, 58 ರನ್ ಗಳಿಸಿರುವ ಜೋರೂಟ್ ಮತ್ತು 67 ರನ್ ಗಳಿಸಿರುವ ಒಲಿ ಪೋಪ್ ಬ್ಯಾಟಿಂಗ್ ಮುಂದುವರೆಸಿದ್ದಾರೆ.
ಇಂಗ್ಲೆಂಡ್ ತಂಡದ ವಿಕೆಟ್ ಪಡೆಯಲು ಭಾರತೀಯ ಬೌಲರ್ ಗಳು ಹರಸಾಹಸ ಪಡುತ್ತಿದ್ದು, ನಿನ್ನೆ ಅಂಶುಲ್ ಕಂಬೋಜ್ ಮತ್ತು ರವೀಂದ್ರ ಜಡೇಜಾ ಮಾತ್ರ ತಲಾ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ರಾಹುಲ್ ದ್ರಾವಿಡ್, ಜಾಕ್ ಕಾಲಿಸ್ ದಾಖಲೆ ಹಿಂದಿಕ್ಕಿದ ಜೋ ರೂಟ್
ಇನ್ನು 4ನೇ ಟೆಸ್ಟ್ ಪಂದ್ಯದಲ್ಲೂ ತಮ್ಮ ಅದ್ಭುತ ಬ್ಯಾಟಿಂಗ್ ಮುಂದುವರೆಸಿರುವ ಜೋ ರೂಟ್ ಮೊದಲ ಇನ್ನಿಂಗ್ಸ್ ಆಕರ್ಷಕ ಅರ್ಧಶತಕಗಳಿಸುವ ಮೂಲಕ ತಂಡಕ್ಕೆ ನೆರವಾಗಿದ್ದಾರೆ. ಅಂತೆಯೇ ಇಂದಿನ ತಮ್ಮ ಅರ್ಧಶತಕದೊಂದಿಗೆ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ನಲ್ಲಿ ತಮ್ಮ ರನ್ ಗಳಿಕೆಯನ್ನು 13300ಕ್ಕೆ ಏರಿಕೆ ಮಾಡಿಕೊಂಡಿರುವ ಜೋ ರೂಟ್, ಈ ಮೂಲಕ ರಾಹುಲ್ ದ್ರಾವಿಡ್ ಮತ್ತು ಜಾಕ್ ಕಾಲಿಸ್ ಅವರನ್ನು ಹಿಂದಿಕ್ಕಿದ್ದಾರೆ.
ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿರುವ ಆಟಗಾರರ ಪಟ್ಟಿಯಲ್ಲಿ ಜೋ ರೂಟ್ ಇದೀಗ 3ನೇ ಸ್ಥಾನಕ್ಕೇರಿದ್ದಾರೆ. ಈ ಪಟ್ಟಿಯಲ್ಲಿ 15921 ರನ್ ಗಳಿಸಿರುವ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದು, 13378 ರನ್ ಗಳಿಸಿರುವ ರಿಕ್ಕಿ ಪಾಂಟಿಂಗ್ 2ನೇ ಸ್ಥಾನದಲ್ಲಿದ್ದಾರೆ. 13300 ರನ್ ಗಳೊಂದಿಗೆ ಜೋ ರೂಟ್ 3ನೇ ಸ್ಥಾನಕ್ಕೇರಿದ್ದು, 13289 ರನ್ ಗಳನ್ನು ಕಲೆಹಾಕಿರುವ ದಕ್ಷಿಣ ಆಫ್ರಿಕಾದ ಜಾಕ್ ಕಾಲಿಸ್ 4 ಮತ್ತು 13288 ರನ್ ಗಳಿಸಿರುವ ರಾಹುಲ್ ದ್ರಾವಿಡ್ 5ನೇ ಸ್ಥಾನದಲ್ಲಿದ್ದಾರೆ.
Most runs in Test cricket
15921 - Sachin Tendulkar
13378 - Ricky Ponting
13300* - Joe Root
13289 - Jacques Kallis
13288 - Rahul Dravid
ಶತಕದತ್ತ ರೂಟ್
ಇನ್ನು ಇತ್ತೀಚಿನ ವರದಿಗಳು 3ನೇ ದಿನದ ಭೋಜನ ವಿರಾಮದ ವೇಳೆಗೆ ಇಂಗ್ಲೆಂಡ್ 2 ವಿಕೆಟ್ ನಷ್ಟಕ್ಕೆ 332 ರನ್ ಗಳಿಸಿದ್ದು, ಜೋ ರೂಟ್ 63 ರನ್ ಗಳನ್ನು ಕಲೆಹಾಕಿದ್ದು, ಶತಕದತ್ತ ಮುನ್ನುಗ್ಗುತ್ತಿದ್ದಾರೆ. ಅವರಿಗೆ 70 ರನ್ ಗಳಿಸಿರುವ ಒಲಿ ಪೋಪ್ ಉತ್ತಮ ಸಾಥ್ ನೀಡುತ್ತಿದ್ದಾರೆ.