ಲಂಡನ್: ಪ್ರವಾಸಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಆರಂಭವಾಗಿದ್ದು, ಟಾಸ್ ಗೆದ್ದಿರುವ ಇಂಗ್ಲೆಂಡ್ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಲಂಡನ್ ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಆರಂಭವಾಗಿರುವ 5ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಓಲಿ ಪೋಪ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಇದರೊಂದಿಗೆ ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್ ಮಗದೊಂದು ಬಾರಿ ಟಾಸ್ ಗೆಲ್ಲುವಲ್ಲಿ ವಿಫಲರಾಗಿದ್ದಾರೆ.
ಈ ಹಿಂದೆ 4ನೇ ಪಂದ್ಯದಲ್ಲಿ ಗಾಯಗೊಂಡ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಅಂತಿಮ ಪಂದ್ಯಕ್ಕೆ ಅಲಭ್ಯರಾಗಿರುವ ಹಿನ್ನಲೆಯಲ್ಲಿ ಉಪ ನಾಯಕ ಓಲಿ ಪೋಪ್ ತಂಡದ ಸಾರಥ್ಯ ವಹಿಸಿದ್ದಾರೆ.
ಆತಿಥೇಯ ಇಂಗ್ಲೆಂಡ್ ತಂಡದಲ್ಲಿ ನಾಲ್ಕು ಬದಲಾವಣೆ ಮಾಡಲಾಗಿದ್ದು, ಬಲಭುಜದ ಗಾಯದಿಂದಾಗಿ ನಾಯಕ ಬೆನ್ ಸ್ಟೋಕ್ಸ್ ಅಲಭ್ಯರಾಗಿದ್ದಾರೆ. ಜೋಫ್ರಾ ಆರ್ಚರ್, ಬ್ರೈಡನ್ ಕಾರ್ಸ್ ಹಾಗೂ ಲಿಯಾಮ್ ಡಾಸನ್ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ. ಗಸ್ ಅಟ್ಕಿನ್ಸನ್, ಜೇಮಿ ಓವರ್ಟನ್ ಹಾಗೂ ಜೋಶ್ ಟಂಗ್ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.
ಭಾರತ ತಂಡದಲ್ಲಿ 3 ಬದಲಾವಣೆ
ಇನ್ನು ಭಾರತ ತಂಡದಲ್ಲಿಯೂ ಮೂರು ಬದಲಾವಣೆಗಳನ್ನು ಮಾಡಲಾಗಿದೆ. ಕೆಲಸದೊತ್ತಡ ನಿಭಾಯಿಸುವ ಹಿನ್ನೆಲೆಯಲ್ಲಿ ಅಗ್ರ ವೇಗಿ ಜಸ್‌ಪ್ರೀತ್ ಬೂಮ್ರಾ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಗಾಯದ ಕಾರಣ ರಿಷಭ್ ಪಂತ್ ಸಹ ಅಲಭ್ಯರಾಗಿದ್ದಾರೆ. ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಅವರನ್ನು ಅಂತಿಮ ಪಂದ್ಯದಿಂದ ಕೈಬಿಡಲಾಗಿದೆ. ಕರ್ನಾಟಕದ ಆಟಗಾರರಾದ ಕರುಣ್ ನಾಯರ್ ಹಾಗೂ ಪ್ರಸಿದ್ಧ ಕೃಷ್ಣ ತಂಡಕ್ಕೆ ಪುನರಾಗಮನ ಮಾಡಿದ್ದಾರೆ. ಹಾಗೆಯೇ ಪಂತ್ ಸ್ಥಾನದಲ್ಲಿ ಧ್ರುವ್ ಜುರೇಲ್ ವಿಕೆಟ್ ಕೀಪಿಂಗ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆತಿಥೇಯ ಇಂಗ್ಲೆಂಡ್ 2-1ರ ಅಂತರದ ಮುನ್ನಡೆಯಲ್ಲಿದೆ. ಸರಣಿಯಲ್ಲಿ ಸಮಬಲ ಸಾಧಿಸುವ ನಿಟ್ಟಿನಲ್ಲಿ ಭಾರತ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.
ತಂಡಗಳು ಇಂತಿವೆ
ಭಾರತ:
ಶುಭಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಕೆ.ಎಲ್. ರಾಹುಲ್, ಸಾಯಿ ಸುದರ್ಶನ್, ಕರುಣ್ ನಾಯರ್, ರವೀಂದ್ರ ಜಡೇಜ, ಧ್ರುವ್ ಜುರೇಲ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಆಕಾಶ್ ದೀಪ್, ಪ್ರಸಿದ್ಧ ಕೃಷ್ಣ ಮತ್ತು ಮೊಹಮ್ಮದ್ ಸಿರಾಜ್,
ಇಂಗ್ಲೆಂಡ್
ಜಾಕ್ ಕ್ರಾಲಿ, ಬೆನ್ ಡಕೆಟ್, ಓಲಿ ಪೋಪ್ (ನಾಯಕ), ಜೋ ರೂಟ್, ಹ್ಯಾರಿ ಬ್ರೂಕ್, ಜೇಕಬ್ ಬೆಥೆಲ್, ಜೇಮಿ ಸ್ಮಿತ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಗಸ್ ಅಟ್ಕಿನ್ಸನ್, ಜೇಮಿ ಓವರ್ಟನ್, ಜೋಶ್ ಟಂಗ್
ಭಾರತಕ್ಕೆ ಆರಂಭಿಕ ಆಘಾತ
ಇನ್ನು ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುತ್ತಿರುವ ಭಾರತ ತಂಡ ಆರಂಭಿಕ ಆಘಾತ ಎದುರಿಸಿದೆ. ಪಂದ್ಯದ ನಾಲ್ಕನೇ ಓವರ್ ನ ಮೊದಲ ಎಸೆತದಲ್ಲೇ ಆಟ್ಕಿನ್ಸನ್ ಬೌಲಿಂಗ್ ನಲ್ಲಿ ಕೇವಲ 2ರನ್ ಗಳಿಸಿದ್ದ ಯಶಸ್ವಿ ಜೈಸ್ವಾಲ್ ಔಟಾದರು. ಪ್ರಸ್ತುತ ಕೆಎಲ್ ರಾಹುಲ್ ಮತ್ತು ಸಾಯಿ ಸುದರ್ಶನ್ ಕ್ರೀಸ್ ನಲ್ಲಿದ್ದಾರೆ.