ಲಂಡನ್: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಷಿಫ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಪರ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿರುವ ಕಗಿಸೋ ರಬಾಡಾ (Kagiso Rabada) ಆಫ್ರಿಕಾದ ಮತ್ತೋರ್ವ ಲೆಜೆಂಡ್ ಬೌಲರ್ ಅಲನ್ ಡೊನಾಲ್ಡ್ (Allan Donald)ರ ದಾಖಲೆ ಹಿಂದಿಕ್ಕಿದ್ದಾರೆ.
ಇಂಗ್ಲೆಂಡ್‌ನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಫೈನಲ್ ಪಂದ್ಯ ನಿರ್ಣಾಯಕ ಘಟ್ಟದತ್ತ ಸಾಗಿದ್ದು ಉಭಯ ತಂಡಗಳ ಪ್ರಬಲ ಬೌಲಿಂಗ್ ಬ್ಯಾಟರ್ ಗಳನ್ನು ಇನ್ನಿಲ್ಲದಂತೆ ಕಾಡುತ್ತಿದೆ.
ಫೈನಲ್ ಪಂದ್ಯದ ಮೊದಲ 2 ದಿನದಾಟದಲ್ಲಿ ಬೌಲರ್ ಗಳು ಮೆರೆದಾಡಿದ್ದು, ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಆಸ್ಟ್ರೇಲಿಯಾ ತಂಡವು 212 ರನ್ ಗೆ ಆಲೌಟಾಗಿದೆ. ಇತ್ತ ದಕ್ಷಿಣ ಆಫ್ರಿಕಾ ಕೂಡ ಮೊದಲ ಇನ್ನಿಂಗ್ಸ್ ನಲ್ಲಿ 138 ರನ್ ಗಳಿಗೆ ಆಲೌಟ್ ಆಗಿದೆ.
2ನೇ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಕಗಿಸೋ ರಬಾಡ ಇನ್ನಿಲ್ಲದಂತೆ ಕಾಡಿದ್ದು, 4 ವಿಕೆಟ್ ಕಬಳಿಸಿದ್ದಾರೆ. ಒಟ್ಟು 2 ಇನ್ನಿಂಗ್ಸ್ ಗಳಿಂದ ರಬಾಡ 9 ವಿಕೆಟ್ ಪಡೆದಿದ್ದು, ತಂಡದ ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ.
ಅಲನ್ ಡೊನಾಲ್ಡ್ ದಾಖಲೆ ಮುರಿದ ರಬಾಡಾ
ಇನ್ನು ಈ ಪ್ರದರ್ಶನದ ಮೂಲಕ ದಕ್ಷಿಣ ಆಫ್ರಿಕಾದ ಕಗಿಸೋ ರಬಾಡಾ ಆಫ್ರಿಕನ್ ಕ್ರಿಕೆಟ್ ದಂತಕಥೆ ಅಲನ್ ಡೊನಾಲ್ಡ್ ದಾಖಲೆಯನ್ನು ಹಿಂದಿಕ್ಕಿದ್ದಾರೆ. ದಕ್ಷಿಣ ಆಫ್ರಿಕಾ ಪರ ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ 4ನೇ ಆಟಗಾರ ಎಂಬ ಕೀರ್ತಿಗೆ ಕಗಿಸೋ ರಬಾಡ ಪಾತ್ರರಾಗಿದ್ದಾರೆ.
30 ವರ್ಷ ವಯಸ್ಸಿನ ರಬಾಡ 71 ಪಂದ್ಯಗಳಲ್ಲಿ 332 ವಿಕೆಟ್‌ಗಳನ್ನು ಗಳಿಸುವ ಮೂಲಕ, ಅಲನ್ ಡೊನಾಲ್ಡ್ ಅವರ 330 ಟೆಸ್ಟ್ ವಿಕೆಟ್‌ಗಳ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಅಂತೆಯೇ ಈ ಮೂಲಕ ದಕ್ಷಿಣ ಆಫ್ರಿಕಾದ ನಾಲ್ಕನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು.
ಕೈಲ್ ಜೇಮಿಸನ್ (2021 ರ ಫೈನಲ್ vs ಭಾರತ) ನಂತರ ಡಬ್ಲ್ಯೂಟಿಸಿ ಫೈನಲ್‌ನಲ್ಲಿ ಐದು ವಿಕೆಟ್‌ಗಳನ್ನು ಪಡೆದ ಎರಡನೇ ಬೌಲರ್ ಎಂಬ ಕೀರ್ತಿಗೂ ರಬಾಡ ಪಾತ್ರರಾಗಿದ್ದು, ಐಸಿಸಿ ಟೂರ್ನಮೆಂಟ್ ಫೈನಲ್‌ನಲ್ಲಿ ಜಾಕ್ವೆಸ್ ಕಾಲಿಸ್ (1998 ರ ಐಸಿಸಿ ನಾಕೌಟ್ ಟ್ರೋಫಿ ಫೈನಲ್) ನಂತರ ಐಸಿಸಿ ಟೂರ್ನಮೆಂಟ್ ಫೈನಲ್‌ನಲ್ಲಿ ಈ ಸಾಧನೆ ಮಾಡಿದ ಏಕೈಕ ದಕ್ಷಿಣ ಆಫ್ರಿಕಾದ ಬೌಲರ್ ಕೂಡ ಆಗಿದ್ದಾರೆ.