ಮೈಸೂರು: ಮಹಿಳಾ ಪ್ರೀಮಿಯರ್ ಲೀಗ್ ನಲ್ಲಿ ಆರ್ ಸಿಬಿ ಮಹಿಳಾ ತಂಡ ಸೋತ ಬೆನ್ನಲ್ಲೇ ಇತ್ತ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲಿ ಚೆನ್ನೈ ವಿರುದ್ಧ ಕರ್ನಾಟಕ ಬುಲ್ಡೋಜರ್ಸ್ ತಂಡ ಸೆಮಿಫೈನಲ್ ನಲ್ಲಿ ಮುಗ್ಗರಿಸಿದೆ.
ಹೌದು.. ಮೈಸೂರಿನ ಕೆಎಸ್ ಸಿಎ ಕ್ರೀಡಾಂಗಣದಲ್ಲಿ ಇಂದು ನಡೆದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL)ನ ಸೆಮಿ ಫೈನಲ್ ಕಾಳಗದಲ್ಲಿ ಚೆನ್ನೈ ರೈನೋಸ್ ತಂಡ 7 ವಿಕೆಟ್ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಮಾತ್ರವಲ್ಲದೇ ಸಿಸಿಎಲ್ 2025ರ ಫೈನಲ್ ಹಂತಕ್ಕೆ ಪ್ರವೇಶ ಪಡೆದಿದೆ. ಫೈನಲ್ ನಲ್ಲಿ ಚೆನ್ನೈ ತಂಡ ಪಂಜಾಬ್ ತಂಡವನ್ನು ಎದುರಿಸಲಿದೆ.
ನಟ ಕಿಚ್ಚಾ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ ನೀಡಿದ 130 ರನ್ ಗಳ ಗರಿ ಬೆನ್ನಟ್ಟಿದ ಚೆನ್ನೈ ರೈನೋಸ್ ತಂಡ 9.3 ಓವರ್ ನಲ್ಲಿ 3 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿ 7 ವಿಕೆಟ್ ಅಂತರದಲ್ಲಿ ಗೆದ್ದು ಬೀಗಿತು. ಚೆನ್ನೈ ಪರ 2ನೇ ಇನ್ನಿಂಗ್ಸ್ ನಲ್ಲಿ ಅಜಯ್ (65 ರನ್) ಮತ್ತು ನಾಯಕ ವಿಕ್ರಾಂತ್ (50 ರನ್) ಅಮೋಘ ಜೊತೆಯಾಟವಾಡಿ ತಂಡಕ್ಕೆ ವಿರೋಚಿತ ಗೆಲುವು ತಂದಿತ್ತರು. ಈ ಪಂದ್ಯದ ಎರಡೂ ಇನ್ನಿಂಗ್ಸ್ ನಲ್ಲಿ ಅರ್ಧಶತಕ ಸಿಡಿಸಿದ ಚೆನ್ನೈ ನಾಯಕ ವಿಕ್ರಾಂತ್ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಫೈನಲ್ ಗೆ ಲಗ್ಗೆ
ಕರ್ನಾಟಕ ಬುಲ್ಡೋಜರ್ಸ್ ತಂಡದ ವಿರುದ್ಧ ಗೆಲುವಿನೊಂದಿಗೆ ಚೆನ್ನೈ ರೈನೋಸ್ ತಂಡ ಫೈನಲ್ ಗೆ ಲಗ್ಗೆ ಇಟ್ಟಿದ್ದು ಫೈನಲ್ ನಲ್ಲಿ ಪಂಜಾಬ್ ತಂಡದೊಂದಿಗೆ ಪ್ರಶಸ್ತಿಗಾಗಿ ಸೆಣಸಲಿದೆ. ನಾಳೆ ಇದೇ ಮೈಸೂರಿನ ಕೆಎಸ್ ಸಿಎ ಮೈದಾನದಲ್ಲಿ ಪಂಜಾಬ್ ಮತ್ತು ಚೆನ್ನೈ ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ.