ನವದೆಹಲಿ: ರಂಜಾನ್ ವೇಳೆಯಲ್ಲಿ 'ರೋಜಾ' ಮಾಡದ ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಶಮಿ ಕ್ರಿಮಿನಲ್ ಎಂದು ಅಖಿಲ ಭಾರತೀಯ ಮುಸ್ಲಿಂ ಜಮಾತ್ ಅಧ್ಯಕ್ಷ ಮೌಲಾನಾ ಶಹಬುದ್ದಿನ್ ರಜ್ವಿ ಬರೇಲ್ವಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಐಸಿಸಿ ಚಾಂಪಿಯನ್ಸ್ ಶಿಫ್ ಟೂರ್ನಿಯ ಆಸೀಸ್ ವಿರುದ್ಧದ ಸೆಮಿ ಫೈನಲ್ ಪಂದ್ಯದ ವೇಳೆ ಮೊಹಮ್ಮದ್ ಶಮಿ, ರೋಜಾ ಮಾಡದೆ ದೇಶದ ಪರ ಕ್ರಿಕೆಟ್ ಆಡಿದ್ದರು. ಇದಕ್ಕೆ ಪರ ಹಾಗೂ ವಿರೋಧ ಅಭಿಪ್ರಾಯಗಳು ಕೇಳಿಬರುತ್ತಿವೆ.
ಈ ಕುರಿತು ANI ಜೊತೆಗೆ ಮಾತನಾಡಿದ ಮೌಲಾನಾ, ಶಮಿ ರೋಜಾ ನಿಯಮಗಳನ್ನು ಪಾಲನೆ ಮಾಡದೆ ಅಪರಾಧ ಮಾಡಿದ್ದಾರೆ. ಅವರು ಹಾಗೆ ಮಾಡಬಾರದಿತ್ತು. ಶರಿಯತ್‌ನ ದೃಷ್ಟಿಯಲ್ಲಿ ಆತ ಅಪರಾಧಿಯಾಗಿದ್ದು, ದೇವರಿಗೆ ಉತ್ತರಿಸಬೇಕು ಎಂದರು.
'ರೋಜಾ' ಮುಸ್ಲಿಂರ ಕಡ್ಡಾಯ ಕರ್ತವ್ಯಗಳಲ್ಲಿ ಒಂದಾಗಿದೆ. ಅದನ್ನು ಪಾಲಿಸದವರು ಅಪರಾಧಿಗಳು. ಯಾವುದೇ ಆರೋಗ್ಯವಂತ ಪುರುಷ ಅಥವಾ ಮಹಿಳೆ 'ರೋಜಾ' ಆಚರಿಸದಿದ್ದರೆ, ಅವರು ದೊಡ್ಡ ಅಪರಾಧಿಯಾಗುತ್ತಾರೆ ಎಂದು ಮೌಲಾನಾ ಹೇಳಿದರು.
ಮೈದಾನದಲ್ಲಿದ್ದ ಜನರು ಶಮಿಯನ್ನು ನೋಡುತ್ತಿದ್ದರು. ಆತ ಆಡುತ್ತಿದ್ದರೆ ಆರೋಗ್ಯವಾಗಿದ್ದಾನೆ ಎಂದರ್ಥ. ಅಂತಹ ಸ್ಥಿತಿಯಲ್ಲಿ ರೋಜಾ ಆಚರಿಸದೆ ನೀರನ್ನು ಸೇವಿಸುವ ಮೂಲಕ ಜನರಲ್ಲಿ ತಪ್ಪು ಸಂದೇಶ ರವಾನಿಸಿದ್ದಾರೆ ಎಂದು ಅವರು ಕಿಡಿಕಾರಿದರು.
ದುಬೈನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಮೊದಲ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ನಾಲ್ಕು ವಿಕೆಟ್‌ಗಳ ಜಯ ಸಾಧಿಸಿದ ನಂತರ ಮೌಲಾನಾ ಬರೇಲ್ವಿ ಈ ಹೇಳಿಕೆ ನೀಡಿದ್ದಾರೆ. ಅಂದಿನ ಪಂದ್ಯದಲ್ಲಿ ಮೊಹಮ್ಮದ್ ಶಮಿ 10 ಓವರ್ ಗಳಲ್ಲಿ 48 ರನ್ ನೀಡಿ, 3 ವಿಕೆಟ್ ಕಬಳಿಸುವ ಮೂಲಕ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಅಲ್ಲದೇ ನ್ಯೂಜಿಲೆಂಡ್‌ನ ಮ್ಯಾಟ್ ಹೆನ್ರಿ ಅವರೊಂದಿಗೆ ಹೆಚ್ಚು ವಿಕೆಟ್ ಪಡೆದವರಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇವರಿಬ್ಬರೂ ಟೂರ್ನಿಯಲ್ಲಿ ಎಂಟು ವಿಕೆಟ್‌ಗಳನ್ನು ಪಡೆದಿದ್ದಾರೆ.
ಮೌಲಾನಾ ಅವರ ಹೇಳಿಕೆ ಸರಿಯಾಗಿಲ್ಲ ಎಂದು ಎನ್‌ಸಿಪಿ ಎಸ್‌ಪಿ ನಾಯಕ ರೋಹಿತ್ ಪವಾರ್ ವಾಗ್ದಾಳಿ ನಡೆಸಿದ್ದಾರೆ.
ಕ್ರೀಡೆ ವಿಚಾರದಲ್ಲಿ ಧರ್ಮವನ್ನು ಎಳೆದು ತರಬಾರದು. ಈಗ ಯಾವುದೇ ಮುಸ್ಲಿಂ ವ್ಯಕ್ತಿಯನ್ನು ಕೇಳಿ, ಅವರೆಲ್ಲರೂ ಮೊಹಮ್ಮದ್ ಶಮಿಗೆ ಬಗ್ಗೆ ಹೆಮ್ಮೆ ಪಡುತ್ತಾರೆ ಎಂದು ರೋಹಿತ್ ಪವಾರ್ ತಿರುಗೇಟು ನೀಡಿದ್ದಾರೆ.