ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಪಂದ್ಯಾವಳಿಯನ್ನು ಈ ಬಾರಿ ಪಾಕಿಸ್ತಾನ ಆಯೋಜಿಸಿತ್ತು. ಆದರೆ, ಭದ್ರತೆಯ ಕಾರಣದಿಂದಾಗಿ ಭಾರತ ತಟಸ್ಥ ಸ್ಥಳದಲ್ಲಿ ಆಡಲು ನಿರ್ಧರಿಸಿತು. ಇದರಿಂದ ದುಬೈನಲ್ಲಿಯೇ ಭಾರತ ತನ್ನೆಲ್ಲ ಪಂದ್ಯಗಳನ್ನು ಆಡಿದೆ. ಭಾರತ ತಾನು ಆಡಿರುವ ಎಲ್ಲ ಪಂದ್ಯಗಳಲ್ಲಿಯೂ ಗೆಲವು ಸಾಧಿಸಿದ್ದು, ಇದೀಗ ಚರ್ಚೆಗೆ ಗ್ರಾಸವಾಗಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿದ್ದ ಎಂಟು ತಂಡಗಳಲ್ಲಿ ಏಳು ತಂಡಗಳು ಪಾಕಿಸ್ತಾನದಲ್ಲಿ ಆಡಿದ್ದು, ಭಾರತದ ಜೊತೆಗಿನ ಪಂದ್ಯಕ್ಕಾಗಿ ದುಬೈಗೆ ಪ್ರಯಾಣ ಬೆಳೆಸಿದ್ದವು. ಆದರೆ, ಟೀಂ ಇಂಡಿಯಾ ಒಂದೇ ಸ್ಥಳದಲ್ಲಿ ಆಡಿದ್ದರಿಂದಲೇ ಎಲ್ಲ ಪಂದ್ಯಗಳನ್ನು ಗೆಲ್ಲಲು ಸಾಧ್ಯವಾಯಿತು ಎಂದು ಹಲವು ಹಿರಿಯ ಆಟಗಾರರು ಟೀಕಿಸಿದ್ದಾರೆ.
ದುಬೈನಲ್ಲಿ ತನ್ನ ಎಲ್ಲ ಪಂದ್ಯಗಳನ್ನು ಆಡುವ ಮೂಲಕ ಭಾರತ ನಿಜವಾಗಿಯೂ ಪ್ರಯೋಜನ ಪಡೆದಿದೆಯೇ? ಎಂಬುದರ ಕುರಿತು ಹಲವು ಅಭಿಪ್ರಾಯಗಳು ವ್ಯಕ್ತವಾಗಿವೆ. ಒಂದೇ ಕಡೆಯಲ್ಲಿ ಆಡಿದ್ದರಿಂದ ಭಾರತದ ವಿಜಯ ಯಾತ್ರೆಗೆ ನೆರವಾಗಿದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲವಾದರೂ, ದುಬೈ ಟೀಂ ಇಂಡಿಯಾದ ತವರು ಮೈದಾನವಾಗಿರಲಿಲ್ಲ. ಹೀಗಾಗಿ, ರೋಹಿತ್ ಶರ್ಮಾ ನೇತೃತ್ವದ ತಂಡವು ಅಲ್ಲಿಗೆ ಒಗ್ಗಿಕೊಳ್ಳುವ ಸವಾಲುಗಳನ್ನು ಮುಂದಿಟ್ಟಿತ್ತು. ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್, ಭಾರತವು ತನ್ನ ಎಲ್ಲ ಪಂದ್ಯಗಳನ್ನು ಅಲ್ಲಿ (ದುಬೈ) ಆಡುವುದರಿಂದ ಪ್ರಯೋಜನ ಪಡೆದುಕೊಂಡಿದೆ ಎಂದು ಹಲವರು ಭಾವಿಸುತ್ತಾರೆ. ಆದರೆ, ಕಣ್ಣಿಗೆ ಕಾಣುವುದಕ್ಕಿಂತ ಹೆಚ್ಚಿನದು ಅಲ್ಲಿದೆ ಎಂದು ಹೇಳಿದ್ದಾರೆ. ಮಿಚೆಲ್ ಚಾಂಪಿಯನ್ಸ್ ಟ್ರೋಫಿಗೆ ಆಸ್ಟ್ರೇಲಿಯಾ ತಂಡದ ಭಾಗವಾಗಿರಲಿಲ್ಲ.
'ದುಬೈ ಪರಿಸ್ಥಿತಿ'ಯು ಭಾರತ ತಂಡಕ್ಕೆ ಅನುಕೂಲಕರವಾಗಿತ್ತು ಎಂದು ಹೇಳಲು ಸ್ಟಾರ್ಕ್ ನಿರಾಕರಿಸಿದರು. ಇತರ ಕ್ರಿಕೆಟಿಗರು ಪ್ರಪಂಚದಾದ್ಯಂತ ನಡೆಯುವ ಫ್ರಾಂಚೈಸಿ ಲೀಗ್‌ಗಳನ್ನು ಆಡುವ ಅವಕಾಶ ಹೊಂದಿದ್ದಾರೆ. ಆದರೆ, ಭಾರತೀಯ ಆಟಗಾರರ ವಿಷಯದಲ್ಲಿ ಹಾಗಲ್ಲ ಎಂದು ಹೇಳಿದರು.
'ದುಬೈನಲ್ಲಿ ಆಡಿದ್ದು ಭಾರತಕ್ಕೆ ಅನುಕೂಲವಾಗಿದೆ ಎಂದು ಎಂದು ನನಗೆ ಖಚಿತವಿಲ್ಲ. ಏಕೆಂದರೆ, ಕ್ರಿಕೆಟಿಗರಾಗಿ ನಮಗೆ ಪ್ರಪಂಚದ ಎಲ್ಲ ಫ್ರಾಂಚೈಸಿಗಳೊಂದಿಗೆ ಆಡಲು ಅವಕಾಶಗಳಿವೆ. ಆದರೆ ಭಾರತೀಯ ಆಟಗಾರರು ಐಪಿಎಲ್‌ನಲ್ಲಿ ಮಾತ್ರ ಆಡಬಹುದು. ಆದ್ದರಿಂದ, ನೀವು ಅದನ್ನು ನಂಬಲು ಸಾಧ್ಯವಿಲ್ಲ. ಏಕೆಂದರೆ, ನೀವು ವರ್ಷಕ್ಕೆ ಐದರಿಂದ ಆರು ವಿಭಿನ್ನ ಫ್ರಾಂಚೈಸಿ ಲೀಗ್‌ಗಳಲ್ಲಿ ಆಡುವ ಅವಕಾಶ ಹೊಂದಿದ್ದೀರಿ. ಆದ್ದರಿಂದ, ಅವರು ವೈಟ್ ಬಾಲ್ ಕ್ರಿಕೆಟ್‌ಗೆ ಒಡ್ಡಿಕೊಳ್ಳುತ್ತಿದ್ದಾರೆ' ಎಂದು ಸ್ಟಾರ್ಕ್ ಫ್ಯಾನಾಟಿಕ್ಸ್ ಟಿವಿಯಲ್ಲಿ ಹೇಳಿದರು.
ಟೀಂ ಇಂಡಿಯಾದ ಚಾಂಪಿಯನ್ಸ್ ಟ್ರೋಫಿ ಗೆಲುವಿನಿಂದ ನನಗೇನು ಆಶ್ಚರ್ಯವಾಗಿಲ್ಲ. ಏಕೆಂದರೆ, ಅವರು ನಾನು ಐಪಿಎಲ್ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುತ್ತಿದ್ದಾಗ ವರುಣ್ ಚಕ್ರವರ್ತಿ ಅವರ ಕೌಶಲ್ಯಗಳನ್ನು ಹತ್ತಿರದಿಂದ ನೋಡಿದ್ದೆ. ಚಕ್ರವರ್ತಿ ಅವರ ಸಾಮರ್ಥ್ಯ ಕಂಡು ನನಗೆ ವಿಶ್ವಾಸ ಮೂಡಿತ್ತು. ಇದು ಭಾರತದ ಯಶಸ್ಸಿಗೆ ಕಾರಣವಾಗಿರಬಹುದು ಎಂದು ಹೇಳಿದರು.
'ಭಾರತ ಗೆದ್ದಿದ್ದು ಆಶ್ಚರ್ಯವೇನಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಒಂದೇ ಒಂದು ಚೆಂಡನ್ನು ನೋಡಲಿಲ್ಲ. ಚಾಂಪಿಯನ್ಸ್ ಟ್ರೋಫಿಯ ಹೆಚ್ಚಿನ ಭಾಗವನ್ನು ನಾನು ನೋಡಿದ್ದೇನೆ ಎಂದು ನನಗೆ ಖಚಿತವಿಲ್ಲ. ಆಸ್ಟ್ರೇಲಿಯನ್ ಪಂದ್ಯಗಳ ಕೆಲವು ತುಣುಕುಗಳು ಮಾತ್ರ ನೋಡಿದ್ದೇನೆ. ಕಳೆದ ಆವೃತ್ತಿಯಲ್ಲಿ ನಾನು ವರುಣ್ ಚಕ್ರವರ್ತಿ ಅವರೊಂದಿಗೆ ಕೆಕೆಆರ್ ಜೊತೆ ಆಡಿದ್ದೆ. ಅವರೊಬ್ಬ ಅದ್ಭುತ ಪ್ರತಿಭೆ, ಆಸಕ್ತಿದಾಯಕ ಬೌಲರ್. ಈಗ ಅವರು ಇದುವರೆಗಿನ ಅತ್ಯುತ್ತಮ ವೈಟ್-ಬಾಲ್ ತಂಡದ ಭಾಗವಾಗಿದ್ದಾರೆಯೇ? ಭಾರತೀಯ ಅಭಿಮಾನಿಗಳು ಹೌದು ಎಂದು ಹೇಳುತ್ತಾರೆ. ಆಸ್ಟ್ರೇಲಿಯಾ ಅಭಿಮಾನಿಗಳು ಬಹುಶಃ ಇಲ್ಲ ಎಂದು ಹೇಳುತ್ತಾರೆ' ಎಂದು ಸ್ಟಾರ್ಕ್ ಹೇಳಿದರು.