ಮುಂಬೈ: ಇಲ್ಲಿನ ಬ್ರಬೌರ್ನ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ 47 ರನ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಫೈನಲ್ ಪ್ರವೇಶಿಸಿದೆ.
ನ್ಯಾಟ್ ಸಿವರ್ ಬ್ರಂಟ್ ಮತ್ತು ಹೇಲಿ ಮ್ಯಾಥ್ಯೂಸ್ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಆ್ಯಶ್ ಗಾರ್ಡರ್ನರ್ ಪಡೆಯ ಬೌಲರ್‌ಗಳು ಮಂಕಾದರು. ಸತತ ಮೂರನೇ ಬಾರಿ ಎಲಿಮಿನೇಟರ್ ಸುತ್ತಿಗೆ ಅರ್ಹತೆ ಪಡೆದಿದ್ದ ಮುಂಬೈ ಇಂಡಿಯನ್ಸ್ ಗುಜರಾತ್ ಜೈಂಟ್ಸ್ ತಂಡವನ್ನು ಮಣಿಸಿ ಎರಡನೇ ಬಾರಿಗೆ ಫೈನಲ್‌ಗೆ ಲಗ್ಗೆ ಇಟ್ಟಿದೆ.
ಮಹಿಳಾ ಪ್ರೀಮಿಯರ್ ಲೀಗ್ ಚೊಚ್ಚಲ ಆವೃತ್ತಿಯಲ್ಲೇ ಫೈನಲ್ ಪ್ರವೇಶಿಸಿದ್ದ ಮುಂಬೈ ಇಂಡಿಯನ್ಸ್ ಚಾಂಪಿಯನ್ ಆಗಿತ್ತು. 2024ರ ಆವೃತ್ತಿಯಲ್ಲಿ ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಸೋತಿತ್ತು. ಈ ಆವೃತ್ತಿಯಲ್ಲೂ ಆರ್‌ಸಿಬಿ ಎದುರಿಗೆ ಸೋತಿತ್ತ ಮುಂಬೈ ನೇರ ಫೈನಲ್ ಪ್ರವೇಶದ ಅವಕಾಶವನ್ನು ಕಳೆದುಕೊಂಡಿತ್ತು.
ಟಾಸ್ ಗೆದ್ದ ಗುಜರಾತ್ ಜೈಂಟ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 213 ರನ್ ಕಲೆಹಾಕಿತು. ಹೇಲಿ ಮ್ಯಾಥ್ಯೂಸ್ 50 ಎಸೆತಗಳಲ್ಲಿ 77 ರನ್ ಗಳಿಸಿದರೆ, ನ್ಯಾಟ್ ಸಿವರ್ ಬ್ರಂಟ್ 41 ಎಸೆತಗಳಲ್ಲಿ 77 ರನ್ ಗಳಿಸಿ ತಂಡಕ್ಕೆ ಬೃಹತ್ ಮೊತ್ತ ಕಲೆಹಾಕಲು ನೆರವಾದರು. ನಾಯಕಿ ಹರ್ಮನ್ ಪ್ರೀತ್ ಕೌರ್ ಕೇವಲ 12 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್ ಸಹಿತ 36 ರನ್ ಗಳಿಸಿ ಮಿಂಚಿದರು.
ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಗುಜರಾತ್ ಜೈಂಟ್ಸ್ ತಂಡ 19.2 ಓವರ್‌ಗಳಲ್ಲಿ 166 ರನ್ ಗಳಿಸುವಷ್ಟರಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ಈ ಮೂಲಕ ಮೊದಲ ಫೈನಲ್ ಪ್ರವೇಶದ ಕನಸು ಛಿದ್ರಗೊಂಡಿತು.
WPL ಇತಿಹಾಸದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಸತತ ಏಳನೇ ಗೆಲುವು ಸಾಧಿಸಿತು. ಮುಂಬೈ ಇಂಡಿಯನ್ಸ್ ತಂಡ ಶನಿವಾರ (ಮಾರ್ಚ್ 15) ದಂದು ನಡೆಯಲಿರುವ ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.
ಕಳೆದ ಎರಡು ಆವೃತ್ತಿಗಳಲ್ಲಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಗುಜರಾತ್ ಜೈಂಟ್ಸ್ ತಂಡವು ಈ ಬಾರಿ ನಾಕೌಟ್ ಹಂತವನ್ನು ತಲುಪಿತ್ತು.